ಡಿಸೆಂಬರ್‌ ಅಂತ್ಯಕ್ಕೆ ಹೆಬ್ಬಾಳ ಫ್ಲೈಓವರ್‌ ಕಾಮಗಾರಿ ಪೂರ್ಣ: ಸಿಎಂ ಸಿಟಿ ರೌಂಡ್ಸ್

KannadaprabhaNewsNetwork |  
Published : Sep 13, 2024, 01:37 AM ISTUpdated : Sep 13, 2024, 08:22 AM IST
Nagawara  1 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಹೆಬ್ಬಾಳ ಫ್ಲೈಓವರ್‌ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೆಟ್ರೋ ಕಾಮಗಾರಿ ಮತ್ತು ರಸ್ತೆ ಡಾಂಬರೀಕರಣದ ಬಗ್ಗೆಯೂ ಚರ್ಚಿಸಿದರು.

 ಬೆಂಗಳೂರು :  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರ್ಮಿಸಲಾಗುತ್ತಿರುವ ಹೆಬ್ಬಾಳ ಜಂಕ್ಷನ್‌ನ ಫ್ಲೈಓವರ್‌ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಮೂರು ತಿಂಗಳ ನಂತರ ನಗರದ ಆಯ್ದ ಕಡೆ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ರಸ್ತೆ, ಸೇತುವೆ ಹಾಗೂ ಮೆಟ್ರೋ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿದ ಅವರು, ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಧಾನಸೌಧದಿಂದ ಬಿಎಂಟಿಸಿ ಬಸ್‌ನಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ,ಜೆ.ಜಾರ್ಜ್‌, ಬೈರತಿ ಬಸವರಾಜ್‌, ಬಿಡಿಎ ಅಧ್ಯಕ್ಷ ಹ್ಯಾರೀಸ್‌ ಸೇರಿದಂತೆ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಕರಿಯಣ್ಣಪಾಳ್ಯದ ಸರ್ವೀಸ್‌ ರಸ್ತೆ ಮತ್ತು ಹೆಣ್ಣೂರು ಜಂಕ್ಷನ್‌ನ ಡಾಂಬರೀಕರಣ ಕಾಮಗಾರಿ, ಕೆ.ಆರ್‌.ಪುರದ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ನಕ್ಷೆ ವೀಕ್ಷಿಸಿದರು.

ಮೊದಲಿಗೆ ಹೆಬ್ಬಾಳ ಜಂಕ್ಷನ್‌ನಲ್ಲಿ ಬಿಡಿಎ ನಿರ್ಮಿಸುತ್ತಿರುವ ಫ್ಲೈಓವರ್‌ ಕಾಮಗಾರಿ ವೀಕ್ಷಣೆ ಮಾಡಿದರು. ಕಾಮಗಾರಿ ಬಗ್ಗೆ ಬಿಡಿಎ ಅಧ್ಯಕ್ಷ ಹ್ಯಾರೀಸ್‌ ಹಾಗೂ ಆಯುಕ್ತ ಎನ್‌.ಜಯರಾಮ್‌ ಅವರಿಂದ ಮಾಹಿತಿ ಪಡೆದುಕೊಂಡರು. ಡಿಸೆಂಬರ್‌ ಅಂತ್ಯದೊಳಗೆ ಫ್ಲೈಓವರ್‌ ಕಾಮಗಾರಿ ಮುಕ್ತಾಯಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.

ಡಾಂಬರೀಕರಣಕ್ಕೆ ತಿಕ್ಕಾಟ

ಹೊರ ವರ್ತುಲ ರಸ್ತೆಯ ಕರಿಯಣ್ಣನಪಾಳ್ಯ ಮತ್ತು ಹೆಣ್ಣೂರು ಜಂಕ್ಷನ್‌ ಬಳಿ ಮೆಟ್ರೋ ಕಾಮಗಾರಿ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲಿಸಿದರು. ಮೆಟ್ರೋ ಕಾಮಗಾರಿ ನಡೆಯುತ್ತಿರುವ ರಸ್ತೆಯ ಡಾಂಬರೀಕರಣ ವಿಚಾರವಾಗಿ ಮೆಟ್ರೋ ಮತ್ತು ಬಿಬಿಎಂಪಿ ಅಧಿಕಾರಿಗಳು ಮುಖ್ಯಮಂತ್ರಿ ಎದುರೇ ತಿಕ್ಕಾಟ ನಡೆಸಿದರು. ಆಗ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಗದರಿದ ಪ್ರಸಂಗ ನಡೆಯಿತು.

ಸರ್ವೀಸ್‌ ರಸ್ತೆಯಲ್ಲಿ ಈಗಾಗಲೇ ಡಾಂಬರೀಕರಣವನ್ನು ಬಿಬಿಎಂಪಿಯಿಂದ ಮಾಡಲಾಗಿದೆ. ಮುಖ್ಯ ರಸ್ತೆಯ ಡಾಂಬರೀಕರಣವನ್ನು ಮೆಟ್ರೋದಿಂದ ಮಾಡಿಸಬೇಕೆಂದು ಬಿಬಿಎಂಪಿ ಅಧಿಕಾರಿಗಳ ಮನವಿ ಆಲಿಸಿದ ಮುಖ್ಯಮಂತ್ರಿಗಳು ತಕ್ಷಣ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್‌ ಅವರಿಗೆ ಡಾಂಬರೀಕರಣ ಮಾಡುವಂತೆ ಸೂಚಿಸಿದರು.

ಹೆಬ್ಬಾಳ ಜಂಕ್ಷನ್‌ ಭೂಸ್ವಾಧೀನದ ಬಗ್ಗೆ ಚರ್ಚೆ

ಕೆ.ಆರ್‌.ಪುರದ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ನಕ್ಷೆಗಳ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಹೆಬ್ಬಾಳ ಜಂಕ್ಷನ್‌ ಬಳಿಯ ಮೆಟ್ರೋ ಸುರಂಗ ಮಾರ್ಗ, ರಸ್ತೆ ಅಗಲೀಕರಣ ಹಾಗೂ ಉಪ ನಗರ ರೈಲ್ವೆ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್‌ ಸೇರಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಗುಂಡಿ ಮುಚ್ಚುವ ಕಾರ್ಯ ವೀಕ್ಷಣೆ ರದ್ದು

ಕೆ.ಆರ್‌.ಪುರದ ಬಳಿಕ ಇಂದಿರಾನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ವೀಕ್ಷಿಸಲು ತೀರ್ಮಾನಿಸಲಾಗಿತ್ತು. ಆದರೆ, ಬಿಬಿಎಂಪಿಯ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವ ಕಾರ್ಯ ವೀಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಪರಿಶೀಲನೆಯನ್ನು ಕೆ.ಆರ್.ಪುರದಲ್ಲಿಯೇ ಮುಕ್ತಾಯಗೊಳಿಸಿ ವಿಧಾನಸೌಧದ ಕಡೆ ಪ್ರಯಾಣ ಬೆಳೆಸಿದರು.

ವಿಧಾನಸೌಧಕ್ಕೆ ಮೆಟ್ರೋದಲ್ಲಿ ಸಿಎಂ

ವಿಧಾನಸೌಧದಿಂದ ಕೆ.ಆರ್‌.ಪುರವರೆಗೆ ಬಿಎಂಟಿಸಿಯಲ್ಲಿ ಪ್ರಯಾಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಣೆ ನಂತರ ಅಲ್ಲಿಂದ ವಾಪಸ್‌ ವಿಧಾನಸೌಧಕ್ಕೆ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು.

ಮೆಟ್ರೋದಲ್ಲಿ ಪ್ರಯಾಣದ ವೇಳೆ ಮುಖ್ಯಮಂತ್ರಿಗಳ ಬಳಿ ಬಂದ ಬಾಲಕಿಗೆ ಮುತ್ತುಕೊಟ್ಟು, ತಲೆಯ ಮೇಲೆ ಕೈಇಟ್ಟು ಹಾರೈಸಿದರು. ಕೆಲ ಸಮಯ ಬಾಲಕಿಯನ್ನು ಪಕ್ಕದಲ್ಲಿ ಕೂರಿಸಿಕೊಂಡರು. ಮೆಟ್ರೋ ಪ್ರಯಾಣದ ಅನುಭವದ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದರು. ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ಪಡೆದು ಖುಷಿ ಪಟ್ಟರು.

ರಾತ್ರೋರಾತ್ರಿ ರಸ್ತೆಗೆ ಡಾಂಬರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಆಗಮಿಸುತ್ತಾರೆಂದು ತಿಳಿಯುತ್ತಿದ್ದಂತೆ ಬಿಬಿಎಂಪಿಯ ಅಧಿಕಾರಿಗಳು, ಕರಿಯಣ್ಣಪಾಳ್ಯದ ಬಳಿಯ ಹೊರ ವರ್ತುಲ ರಸ್ತೆಯ ಸರ್ವೀಸ್‌ ರಸ್ತೆ ಹಾಗೂ ಹೆಣ್ಣೂರು ಜಂಕ್ಷನ್‌ ಬಳಿಯ ಸರ್ವೀಸ್‌ ರಸ್ತೆಗೆ ರಾತ್ರೋರಾತ್ರಿ ಡಾಂಬರೀಕರಣ ಮಾಡಿರುವುದು ಕಂಡು ಬಂತು.

ಸಿಎಂ ಬರುವ ಸೂಚನೆ ಸಿಕ್ಕ ತಕ್ಷಣವೇ ಹೂಳು ತೆರವು!

ಕರಿಯಣ್ಣನಪಾಳ್ಯದ ಬಳಿಯ ರಾಜಕಾಲುವೆಯಲ್ಲಿ ಭಾರೀ ಪ್ರಮಾಣದ ಹೂಳು ತುಂಬಿಕೊಂಡಿದ್ದು, ಮಳೆ ಬಂದಾಗ ರಾಜಕಾಲುವೆಯ ತುಂಬಿ ರಿಂಗ್‌ ರಸ್ತೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಸಾರ್ವಜನಿಕರು ಎಷ್ಟೇ ಮನವಿ ಮಾಡಿದರೂ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಗಮನ ನೀಡಿರಲಿಲ್ಲ. ಆದರೆ, ಗುರುವಾರ ಮುಖ್ಯಮಂತ್ರಿ ಅವರು ಈ ಮಾರ್ಗದಲ್ಲಿ ಬರುತ್ತಾರೆಂದು ತಿಳಿಯುತ್ತಿದಂತೆ ಗುರುವಾರ ಬೆಳಗ್ಗೆಯಿಂದ ಹಿಟಾಚಿ ಬಳಸಿ ಹೂಳು ತೆಗೆಯುವ ಕೆಲಸ ಆರಂಭಿಸಿದ್ದು ಕಂಡು ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ