ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳು ಅಧಿಕವಾಗುತ್ತಲೇ ಇದೆ. ಸೈಬರ್ ವಂಚನೆಗೆ ಬಲಿಯಾಗುತ್ತಿರುವ ಸಂತ್ರಸ್ತರಲ್ಲಿ ಹೆಚ್ಚು ಸುಶಿಕ್ಷಿತರೇ ಆಗಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಕಳವಳ ವ್ಯಕ್ತಪಡಿಸಿದರು.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯ ಬಸವನಪುರದಲ್ಲಿರುವ ರಾಕ್‌ವುಡ್ ಗ್ರೀನ್ ಪಬ್ಲಿಕ್ ಶಾಲೆಯಲ್ಲಿ ಆಕಾಶವಾಣಿ ಬೆಂಗಳೂರು ಮತ್ತು ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ ಹಾಗೂ ಶಾರದ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸೈಬರ್ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೈಬರ್ ಕ್ರಿಮಿನಲ್‌ಗಳು ನಿಮ್ಮ ಬ್ಯಾಂಕ್ ಖಾತೆ, ವೈಯಕ್ತಿಕ ವಿವರಗಳಿಗೆ ಕನ್ನ ಹಾಕಿ ನಿಮ್ಮನ್ನು ಸಂಕಷ್ಟಕ್ಕೆ ತಳ್ಳುತ್ತಾರೆ. ಡಿಜಿಟಲ್ ಬಂಧನ, ಆನ್‌ಲೈನ್ ಟ್ರೇಡಿಂಗ್ ವಂಚನೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಿನಲ್ಲಿ ವಂಚನೆ, ಹಣದ ಬ್ಲಾಕ್ ಮೇಲ್ ಮುಂತಾದ ಸೈಬರ್ ವಂಚನೆಯಿಂದ ದೂರವಿರಲು ಬಹಳ ಎಚ್ಚರಿಕೆ ಅಗತ್ಯ ಎಂದರು.ಇಂಟರ್‌ನೆಟ್ ಬಳಕೆದಾರರು ಮತ್ತು ಗ್ರಾಹಕರು ಆಗಾಗ್ಗೆ ಬ್ಯಾಂಕ್ ವಿವರಗಳನ್ನು ನವೀಕರಿಸಿಬೇಕು, ವೈಯಕ್ತಿಕ ಮಾಹಿತಿಯನ್ನು ಬಿಟ್ಟುಕೊಡಬೇಡಿ, ಓಟಿಪಿ ಹಂಚಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಆಕಾಶವಾಣಿ ಸಹಾಯಕ ನಿರ್ದೇಶಕ ಹಾಗೂ ಕಾರ್ಯಕ್ರಮದ ಮುಖ್ಯಸ್ಥ ಡಾ। ಎ.ಎಸ್.ಶಂಕರನಾರಾಯಣ ಮಾತನಾಡಿ, ಸೈಬರ್ ಅಪರಾಧ, ಸ್ವರೂಪ ಹಾಗೂ ಪರಿಹಾರಗಳ ಕುರಿತು ಸೈಬರ್ ವಂಚನೆಗೆ ಒಳಗಾದ ಸಂತ್ರಸ್ತರನ್ನು ಕರೆಸಿ ಅವರಿಂದಲೇ ಹೇಗೆ ಮೋಸ ಹೋಗಿದ್ದಾರೆ ಎಂದು ತಿಳಿಸುವ ಪಾತಾಳ ಗರಡಿ ಕಾರ್ಯಕ್ರಮ ಯಶಸ್ವಿಯಾಗಿ ಆಕಾಶವಾಣಿಯಲ್ಲಿ ಮೂಡಿಬಂದಿದೆ ಎಂದರು.ವಿಜಿಎಸ್ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ವೆಂಕಟಾಚಲಪತಿ, ಮಾಧ್ಯಮ ಹಳೆಯ ವಿದ್ಯಾರ್ಥಿಗಳ ಸಂಘ ಮಂಗಳ ಗಂಗೋತ್ರಿ ಅಧ್ಯಕ್ಷ ನವೀನ್ ಅಮ್ಮೆಂಬಳ, ಡೇಟಾ ಭದ್ರತೆ ಕೌನ್ಸಿಲ್ ಆಫ್ ಇಂಡಿಯಾ ಹಿರಿಯ ನಿರ್ದೇಶಕ ಕೆ.ವೆಂಕಟೇಶ ಮೂರ್ತಿ, ಉತ್ತರ ಸಿಇಎನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್.ಶಿವರತ್ನ, ಎನ್ಜೆನ್ ತಂತ್ರಜ್ಞಾನದ ವ್ಯವಸ್ಥಾಪಕ ನಿರ್ದೇಶಕ ತರುಣ್ ಕೃಷ್ಣಮೂರ್ತಿ, ಕಾರ್ಯಕ್ರಮದ ಕಾರ್ಯನಿರ್ವಾಹಕಿ ಫ್ಲೋರಿನ್ ರೋಚೆ ಉಪಸ್ಥಿತರಿದ್ದರು.
ಸೈಬರ್ ವಂಚನೆಗೆ ಒಳಗಾದವರು ಸಹಾಯವಾಣಿ 1930 ಹಾಗೂ www.cybercrime.gov.in ಗೆ ಸಂಪರ್ಕಿಸಬಹುದು.