3 ವರ್ಷ ಬಳಿಕ ಮತ್ತೆ ಟೋಯಿಂಗ್ ವಾಹನ ಕಾರ್ಯಾಚರಣೆ

KannadaprabhaNewsNetwork | Published : Aug 31, 2024 1:30 AM

ಸಾರಾಂಶ

3 ವರ್ಷಗಳ ಬಳಿಕ ರಾಜಧಾನಿಯಲ್ಲಿ ಮತ್ತೆ ಸಂಚಾರ ಪೊಲೀಸರ ಟೋಯಿಂಗ್ ವಾಹನಗಳು ಕಾರ್ಯಾಚರಣೆಗಿಳಿದಿದ್ದು, ಗಾಂಧಿನಗರದಲ್ಲಿ ಶುಕ್ರವಾರ ಒಂದೇ ದಿನ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

3 ವರ್ಷಗಳ ಬಳಿಕ ರಾಜಧಾನಿಯಲ್ಲಿ ಮತ್ತೆ ಸಂಚಾರ ಪೊಲೀಸರ ಟೋಯಿಂಗ್ ವಾಹನಗಳು ಕಾರ್ಯಾಚರಣೆಗಿಳಿದಿದ್ದು, ಗಾಂಧಿನಗರದಲ್ಲಿ ಶುಕ್ರವಾರ ಒಂದೇ ದಿನ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್‌ ಅವರು, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಟೋಯಿಂಗ್‌ಗೆ ಅನುಮತಿ ಕೊಡಲಾಗಿದೆ ಎಂದರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್‌ ಬಳಿಕ ಉಪ್ಪಾರಪೇಟೆ ಸಂಚಾರ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೆ ಆ ರಸ್ತೆಗಳಲ್ಲಿ ನಿಲುಗಡೆ ಮಾಡುವ ವಾಹನಗಳ ತೆರವಿಗೆ ಉಪ್ಪಾರಪೇಟೆ ಸಂಚಾರ ಠಾಣೆಗೆ ಟೋಯಿಂಗ್ ವಾಹನಗಳನ್ನು ಬಿಬಿಎಂಪಿಯೇ ನೀಡಿದೆ. ಹೀಗಾಗಿ ಗಾಂಧಿನಗರ ಸೇರಿದಂತೆ ಉಪ್ಪಾರಪೇಟೆ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ಟೋಯಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪಾರ್ಕಿಂಗ್ ಕಾಂಪ್ಲೆಕ್ಸ್ ಆರಂಭವಾದ ಬಳಿಕ 2 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಸರ್ಕಾರ ಆದೇಶಿಸಿತ್ತು. ಈಗ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ದಂಡ ತೆರಬೇಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದಲ್ಲಿ ಟೋಯಿಂಗ್ ವಾಹನದ ಸಿಬ್ಬಂದಿ ಕಿರುಕುಳದ ವಿರುದ್ಧ ಜನಾಕ್ರೋಶ ವ್ಯಕ್ತವಾದ ಕಾರಣಕ್ಕೆ ಟೋಯಿಂಗ್ ಕಾರ್ಯಾಚರಣೆಗೆ ನಿಲ್ಲಿಸಲಾಗಿತ್ತು.

ನೋ ಪಾರ್ಕಿಂಗ್ ಅಷ್ಟೇ ದಂಡ

ಉಪ್ಪಾರಪೇಟೆ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧಿತ ರಸ್ತೆಗಳಲ್ಲಿ ನಿಲ್ಲುವ ವಾಹನಗಳಿಗೆ ನೋ ಪಾರ್ಕಿಂಗ್‌ಗೆ ಮಾತ್ರ 500 ರು ದಂಡ ವಿಧಿಸಲಾಗುತ್ತಿದೆ ಹೊರತು ಟೋಯಿಂಗ್ ದಂಡ ವಿಧಿಸುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಠಾಣೆಗೆ ಎರಡು ಟೋಯಿಂಗ್ ವಾಹನಗಳನ್ನು ಬಿಬಿಎಂಪಿ ನೀಡಿರುವ ಕಾರಣ ಟೋಯಿಂಗ್ ದರ ಹಾಕುತ್ತಿಲ್ಲ. ಟೋಯಿಂಗ್ ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ ಸುಮಾರು 300 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article