ಕನ್ನಡಪ್ರಭ ವಾರ್ತೆ ಕಾಗವಾಡ
ತಾಲೂಕಿನ ಮೋಳೆ ಗ್ರಾಮದ ದೇವರಡ್ಡಿ ತೋಟದ ಬಸವನಗರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1954 ರಿಂದ 1988 ರವರೆಗೆ ಕಲಿತ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು. ಸುಮಾರು 70 ವರ್ಷಗಳ ಬಳಿಕ ಹೀಗೆ ಗುರು-ಶಿಷ್ಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂತಸಪಟ್ಟರು.ತಮ್ಮ ಪ್ರಾಥಮಿಕ ಶಾಲಾ ದಿನಗಳನ್ನು ನೆನೆದು ಅನೇಕ ವಿದ್ಯಾರ್ಥಿಗಳು ಭಾವುಕರಾದರು. ಶಾಲೆಯ ಕುರಿತಾದ ವಿಡಿಯೋ ವೀಕ್ಷಿಸಿದರು. ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ನೆನೆದರು. ತಮಗೆ ಕಲಿಸಿದ ಕೆಲವು ಶಿಕ್ಷಕರು ಸಾವನ್ನಪ್ಪಿದ್ದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಸಂತಸಪಟ್ಟರು.
ವಿದ್ಯಾರ್ಥಿಗಳಿಗೆ ತಿದ್ದಿ ಬುದ್ದಿ ಕಲಿಸಿದ ಗುರುಗಳ ಶ್ರಮದಿಂದ ಇಂಜನಿಯರುಗಳು, ವೈದ್ಯರು, ಶಿಕ್ಷಕರು, ರಾಜಕೀಯ ಮುಖಂಡರುಗಳು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪೊಲೀಸ್ ಅಧಿಕಾರಿಗಳು, ವಕೀಲರಾಗಿ ನಾಡಿನ ತುಂಬ ಸೇವೆ ಸಲ್ಲಿಸುತ್ತಿದ್ದಾರೆ. ಬಹುತೇಕರು ನಿವೃತ್ತಿಯೂ ಆಗಿದ್ದಾರೆ.ವಿದ್ಯೆ ಕಲಿಸಿದ ಗುರುಗಳಾದ ಕಲಗೌಡ ಪಾಟೀಲ, ಎಸ್.ಆರ್.ಜಕಲಿ, ಶಿವಶಂಕರ ಕಡಕೋಳ, ಮನೋಹರ ಮುದ್ದೇಬಿಹಾಳ, ಲಕ್ಷ್ಮಣ ಭೋಸಲೆ, ರಾಮು ಕೋಳಿ ಸೇರಿದಂತೆ ಅನೇಕ ಗುರುಗಳ ಹಾಗೂ ಗುರು ಮಾತೆಯರನ್ನು ಸನ್ಮಾನಿಸಿದರು. ಸಮಾರಂಭದ ಸಾನ್ನಿಧ್ಯವನ್ನು ಹಿರೇಪಡಸಲಗಿಯ ಶಿವಪ್ರಸಾದ ಮಹಾಸ್ವಾಮಿಗಳು ಆಶೀರ್ವದಿಸಿದರು. ನಿವೃತ್ತ ಇಂಜನಿಯರ್ ಅಣ್ಣಪ್ಪ ರಾಮು ಹುಂಡೇಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಯ ಗಿರೀಶ ಶಿಪೂರೆ, ನಿವೃತ್ತ ಯು.ಬಿ.ಗ್ರುಪ್‌ನ ಅಧಿಕಾರಿ ಅಶೋಕ ಪಡನಾಡ, ಮುಖ್ಯೋಪಾಧ್ಯಾಯ ಎ.ಬಿ.ಶಿರಹಟ್ಟಿ ಮಾತನಾಡಿದರು. 1950ಕ್ಕಿಂತ ಪೂರ್ವದಲ್ಲಿ ಶಾಲೆ ನಿರ್ಮಿಸಲು ಭೂದಾನ ಮಾಡಿದ ದಿ.ಗುರುಬಸು ದೇವರಡ್ಡಿ ಪರವಾಗಿ ಅವರ ಸುಪುತ್ರ ಯಲ್ಲಪ್ಪ ದೇವರಡ್ಡಿ ಹಾಗೂ ಶಾಲೆಯನ್ನು ಪ್ರಾರಂಭಿಸಲು ಕಾರಣಿಕರ್ತರು ಹಾಗೂ ಮೊದಲ ಗುರುಗಳಾದ ದಿ.ಹಣಮಂತ ಹುಂಡೇಕರ ಪುತ್ರ ಶಿವರುದ್ರ ಹುಂಡೇಕರ ಅವರನ್ನು ಸನ್ಮಾನಿಸಲಾಯಿತು.
20-ಕಾಗವಾಡ-1ಕಾಗವಾಡ ತಾಲೂಕಿನ ಮೋಳೆ ಗ್ರಾಮದ ದೇವರಡ್ಡಿ ತೋಟದ ಬಸವನಗರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ಜರುಗಿತು.