ತಿಂಗಳ ಬಳಿಕ ಹಿರೀಕಾಟಿ ಖನಿಜ ತನಿಖಾ ಠಾಣೇಲಿ ಸಿಬ್ಬಂದಿ

KannadaprabhaNewsNetwork | Published : May 5, 2025 12:47 AM

ಸಾರಾಂಶ

ಕನ್ನಡಪ್ರಭ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ತಿಂಗಳ ಬಳಿಕ ತಾಲೂಕಿನ ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಗೆ ಸಿಬ್ಬಂದಿ ನೇಮಿಸಿದೆ. ಆದರೆ ತಪಾಸಣೆ ನಡೆಯುತ್ತಿಲ್ಲ, ಸಿಬ್ಬಂದಿ ಮುಂದೆಯೇ ಟಿಪ್ಪರ್‌ ನಿಲ್ಲಿಸದೆ ತೆರಳುತ್ತಿರುವ ನೂರಾರು ಚಿತ್ರಗಳು ಸೆರೆ ಸಿಕ್ಕಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕನ್ನಡಪ್ರಭ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ತಿಂಗಳ ಬಳಿಕ ತಾಲೂಕಿನ ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಗೆ ಸಿಬ್ಬಂದಿ ನೇಮಿಸಿದೆ. ಆದರೆ ತಪಾಸಣೆ ನಡೆಯುತ್ತಿಲ್ಲ, ಸಿಬ್ಬಂದಿ ಮುಂದೆಯೇ ಟಿಪ್ಪರ್‌ ನಿಲ್ಲಿಸದೆ ತೆರಳುತ್ತಿರುವ ನೂರಾರು ಚಿತ್ರಗಳು ಸೆರೆ ಸಿಕ್ಕಿವೆ.

ಮೇ.೧ ರ ಕನ್ನಡಪ್ರಭ ಪತ್ರಿಕೆಯಲ್ಲಿ ಹಿರೀಕಾಟಿ ಖನಿಜ ತನಿಖಾ ಠಾಣೇಲಿ ಸಿಬ್ಬಂದಿಯೇ ಇಲ್ಲ ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದಿತ್ತು. ಮೇ.೩ ರ ಶನಿವಾರ ಬೆಳಗ್ಗೆಯೇ ಮೂವರು ಸಿಬ್ಬಂದಿ ಖನಿಜ ತನಿಖಾ ಠಾಣೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ನೇಮಿಸಿದರೂ ತಪಾಸಣೆ ನಡೆಸದೆ ಇರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಜೇಶ್‌ರನ್ನು ಮಾತನಾಡಿಸಿದಾಗ ತಪಾಸಣೆಗೆ ಸೂಚಿಸುತ್ತೇನೆ ಎಂಬ ಭರವಸೆ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಮಲ್ಲೇಶ್‌ ಖನಿಜ ತನಿಖಾ ಠಾಣೆ ಮುಂದೆ ಕೆಲ ಕಾಲ ನಿಂತರೂ ಕೆಲ ಟಿಪ್ಪರ್‌ಗಳು ನಿಲ್ಲಿಸದೆ ತೆರಳುತ್ತಿದ್ದವು. ಅಕ್ರಮವಾಗಿ ರಾಜಧನ ವಂಚಿಸಿ ಕಲ್ಲು ಹಾಗೂ ಎಂಡಿಪಿ ವಂಚಿಸಿ ಕ್ರಸರ್‌ ಉತ್ಪನ್ನಗಳು ಸಾಗಾಣಿಕೆ ಆಗುತ್ತಿದೆ ಎಂದು ಕನ್ನಡಪ್ರಭ ನಿರಂತರ ವರದಿ ಪ್ರಕಟಿಸಿದ ಬಳಿಕ ಓಪನ್‌ ಆದ ಖನಿಜ ತನಿಖಾ ಠಾಣೆ ತಿಂಗಳ ಮೊದಲ ವಾರದಲ್ಲಿ ಸಿಬ್ಬಂದಿ ನೇಮಿಸುವ ವಿಚಾರದಲ್ಲಿ ಮೂರ್ನಾಲ್ಕು ದಿನ ಬಾಗಿಲು ಮುಚ್ಚುತ್ತಿತ್ತು.

ಆದರೆ ಕಳೆದ ಏಪ್ರಿಲ್‌ ತಿಂಗಳ ಪೂರ್ತಾ ಖನಿಜ ತನಿಖಾ ಠಾಣೆ ಬಂದ್‌ ಆಗಿತ್ತು. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಹಸನ ನಡೆಸಿ ಚೆಕ್‌ ಪೋಸ್ಟ್‌ ಬಾಗಿಲು ತೆರೆದು ಬಿಟ್ಟಿತ್ತು. ನೋಡುಗರ ಕಣ್ಣಿಗೆ ಚೆಕ್‌ ಪೋಸ್ಟ್‌ ಬಾಗಿಲು ತೆರೆದಿದೆಯಲ್ಲ ಎಂದು ತಿಳಿಯಲಿ ಎಂದಿರಬೇಕು. ತಿಂಗಳ ಬಳಿಕ ಜಿಲ್ಲಾಡಳಿತ ಒಲ್ಲದ ಮನಸ್ಸಿನಿಂದ ಖನಿಜ ತನಿಖಾ ಠಾಣೆಗೆ ಸಿಬ್ಬಂದಿ ನೇಮಿಸಿದೆ ಆದರೆ ಸಿಬ್ಬಂದಿ ಟಿಪ್ಪರ್‌ ಗಳ ತಡೆದು ತಪಾಸಣೆ ಮಾಡಲು ಕೆಲ ಕ್ರಸರ್‌ ಮಾಲೀಕರು ಹಾಗು ಕ್ವಾರಿ ಲೀಸ್‌ ದಾರರು ಬಿಡುತ್ತಿಲ್ಲ ಎಂಬ ಆರೋಪವಿದೆ.

ತಿಂಗಳ ಕಾಲ ಲೂಟಿಯೇ ಲೂಟಿ!:

ಚೆಕ್‌ ಪೋಸ್ಟ್‌ ಇದ್ರೂ ನಿಲ್ಲಿಸದೆ ತೆರಳುವ ಕಲ್ಲು ತುಂಬಿದ ಹಾಗೂ ಕ್ರಸರ್‌ ಉತ್ಪನ್ನ ತುಂಬಿದ ಟಿಪ್ಪರ್‌ ಗಳು ತೆರಳುತ್ತಿವೆ. ಇನ್ನೂ ಏಪ್ರಿಲ್‌ ತಿಂಗಳ ಪೂರ್ತಿ ಚೆಕ್‌ ಪೋಸ್ಟ್‌ ಇರಲಿಲ್ಲ ಎಂದ ಮೇಲೆ ಕಣ್ಣಿಗೆ ಎಣ್ಣೆ ಬಿಟ್ಟಿಕೊಂಡಂತೆ ಕೆಲ ಕ್ರಸರ್‌ ಮಾಲೀಕರು ಹಗಲು ರಾತ್ರಿ ಕ್ರಸರ್‌ ಉತ್ಪನ್ನ ಎಂಡಿಪಿ ವಂಚಿಸಿ ಸಾಗಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಕ್ವಾರಿಯಿಂದ ಬಹುತೇಕ ಟಿಪ್ಪರ್‌ ಗಳು ರಾಯಲ್ಟಿ ವಂಚಿಸಿ ಓವರ್‌ ಲೋಡ್‌ ಕಲ್ಲು ಸಾಗಾಣಿಕೆ ಆಗಿದೆ ಇದನ್ನು ತಡೆದು ದಂಡ ಹಾಕುವ ಅಥವಾ ತಪಾಸಣೆ ಮಾಡುವ ತಾಕತ್ತು ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆಗೆ ಇಲ್ಲದಿರುವುದು ಜಿಲ್ಲೆಯ ದುರಂತ ಎನ್ನಬಹುದು.

Share this article