ಕಡೇಚೂರಲ್ಲಿ ಜಲಚರಗಳ ನಂತರ ಜನರೂ ಬಲಿಯಾದಾರು!

KannadaprabhaNewsNetwork |  
Published : Aug 14, 2025, 01:00 AM IST
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್‌ ಅವರು ಕಡೇಚೂರು ಬಾಡಿಯಾಳ ಕೈಗಾರಿಕೆ ವಲಯಕ್ಕೆ ಭೇಟಿ ನೀಡಿ, ಸತ್ತ ಮೀನುಗಳನ್ನು ಪರಿಶೀಲಿಸಿ ಪ್ರಯೋಗಲಯಕ್ಕೆ ತೆಗೆದುಕೊಂಡು ಹೋದರು. | Kannada Prabha

ಸಾರಾಂಶ

ಜಲಚರಗಳ ಸಾವಿಗೆ ಕಾರಣವಾಗಿದ್ದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಬುಧವಾರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕರ್‌ ಹಾಗೂ ಇಲಾಖೆಯ ಸಿಬ್ಬಂದಿ ತಂಡ ಭೇಟಿ ನೀಡಿ, ಮೃತಪಟ್ಟ ಮೀನುಗಳ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕೆಮಿಕಲ್‌ ಕಂಪನಿಗಳು ಚರಂಡಿ ಮೂಲಕ ವಿಷಕಾರಿ ತ್ಯಾಜ್ಯವನ್ನು ಹಳ್ಳಕೊಳ್ಳಕ್ಕೆ ಹರಿಬಿಟ್ಟ ಪರಿಣಾಮ, ಜಲಚರಗಳ ಸಾವಿಗೆ ಕಾರಣವಾಗಿದ್ದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಬುಧವಾರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕರ್‌ ಹಾಗೂ ಇಲಾಖೆಯ ಸಿಬ್ಬಂದಿ ತಂಡ ಭೇಟಿ ನೀಡಿ, ಮೃತಪಟ್ಟ ಮೀನುಗಳ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.

ಕಳೆದ ಹತ್ತಾರು ದಿನಗಳಿಂದ ಈ ಪ್ರದೇಶದಲ್ಲಿನ ರಾಸಾಯನಿಕ ಕಂಪನಿಗಳು ಸತತವಾಗಿ ತ್ಯಾಜ್ಯ ಹರಿಬಿಡುತ್ತಿದ್ದರಿಂದ, ಹಳ್ಳ ಹಾಗೂ ನದಿಗೆ ಕಲುಷಿತ ನೀರು ನದಿಗೆ ಹರಿದು ಹೋಗಿದೆ. ಪರಿಣಾಮ, ಜಲಚರಗಳ ಸಾವಿಗೆ ಕಾರಣವಾಗಿದೆ. ಇದರಿಂದ ಆತಂಕಗೊಂಡ ಈ ಭಾಗದ ಜನರು, ಹಳ್ಳ- ನದಿ ಪಾತ್ರದಲ್ಲಿನ ನೀರನ್ನು ಬಳಸದಂತೆ ಜನರಿಗೆ ಎಚ್ಚರಿಸುವಲ್ಲಿ ಮುಂದಾಗಿದೆ.

ಅಪಾಯಕಾರಿ ತ್ಯಾಜ್ಯ ನೀರಲ್ಲಿ ಬೆರೆತಿದ್ದರಿಂದ ಜಲಚರಗಳ ನಂತರ ಜನರೂ ಬಲಿಯಾದಾರು ಎಂಬ ಆತಂಕ ಇಲ್ಲಿನವರಲ್ಲಿ ಕಾಡುತ್ತಿದೆ. ಪದೇ ಪದೇ ಇಂತಹ ಕೃತ್ಯ ನಡೆಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳು, ಜನರ ಒತ್ತಾಯಕ್ಕೆ ಮಣಿದು ಬರುತ್ತಿರುವಂತಿದೆ. ವಿಲೇವಾರಿ ಘಟಕದ ಮೂಲಕ ಐದು ರಾಜ್ಯಗಳ ತ್ಯಾಜ್ಯ ಇಲ್ಲಿನ ಚರಂಡಿ ಮೂಲಕ ಹಳ್ಳಕ್ಕೆ ಸೇರುತ್ತಿರುವುದು, ಹಾಗೂ ಇನ್ನುಳಿದ ಕೆಲವು ಕಾರ್ಖಾನೆಗಳು ಮಳೆಯ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು, ತ್ಯಾಜ್ಯ ಹೊರಬಿಡುತ್ತಿರುವುದು ಕಂಡು ಬರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕಾಶೀನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಇಂತಹ ಅವಘಡಗಳು ಮುಂದೊಂದು ದಿನ ಭಾರಿ ಬೆಲೆ ತೆರುವಂತಹ ಸನ್ನಿವೇಶಕ್ಕೆ ಕಾರಣವಾಗಬಹುದು ಎಂಬ ಆತಂಕ ಜನಮಾನಸದಲ್ಲಿ ಬೇರುಬಿಟ್ಟಂತಿದೆ. ಜನರ ಸಾವುಗಳ ತಡೆಯಬೇಕಾದ ಸರ್ಕಾರ ಮಾತ್ರ ‘ಇಂಡಸ್ಟ್ರಿಯಲ್‌ ಫ್ರೆಂಡ್ಲೀ’ ವಾತಾವರಣಕ್ಕೆ ಮುಂದಾಗುತ್ತಿರುವುದು ದುರಂತ.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಹಳ್ಳಕೊಳ್ಳಗಳು ಸಂಪೂರ್ಣವಾಗಿ ಮಾಲಿನ್ಯ ಗೊಂಡಿವೆ. ಮಳೆ ಬರುವ ವೇಳೆಯಲ್ಲಿ ಇಲ್ಲಿನ ಕಂಪನಿಗಳು ವಾಮ‌ಮಾರ್ಗದಿಂದ ತಮ್ಮ ವಿಷಕಾರಿ ದ್ರವರೂಪದ ತ್ಯಾಜ್ಯವನ್ನು ಯಥೇಚ್ಛವಾಗಿ ಹಳ್ಳಗಳಿಗೆ ಬಿಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಇಲ್ಲಿರುವ ಮೀನುಗಳು ಸಾಯುತ್ತಿವೆ. ಈ ನೀರು ಸೈದಾಪುರ, ಬಾಡಿಯಾಳ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳ‌ ಜನ ಜಾನುವಾರು ಕುಡಿಯುವುದಕ್ಕೆ ಬಳಸುತ್ತಾರೆ, ಇದು ಆತಂಕದ ವಿಷಯ.

ಸಂಗಪ್ಪ ಹೂಗಾರ್, ಮಾಜಿ ಗ್ರಾಪಂ ಸದಸ್ಯ ಗೂಡೂರು.

ನಮ್ಮ ಕಡೇಚೂರು ಗ್ರಾ.ಪಂ‌.ವ್ಯಾಪ್ತಿಯ ಬಹುತೇಕ ಗ್ರಾಮಗಳ‌ ಜನರು ಮತ್ತು ವಿದ್ಯಾರ್ಥಿಗಳು ಈ ಕಂಪನಿಗಳು ಬಳಸುತ್ತಿರುವ ದುರ್ನಾತದಿಂದ ನಿತ್ಯವು ನರಕಯಾತನೆ ಅನುಭವಿಸುತ್ತಿದ್ದೇವೆ. ಮಳೆ ಬರುವ ಸಮಯದಲ್ಲಿ ದ್ರವರೂಪದ ತ್ಯಾಜ್ಯವನ್ನು ಮಳೆ ನೀರಿನೊಂದಿಗೆ ಬಿಡುತ್ತಿರುವುದರಿಂದ ಈ ಭಾಗದಲ್ಲಿ ಜಲಚರಗಳ ಮಾರಣಹೋಮ ನಡೆಯುತ್ತಿದೆ. ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುವುದರ ಮೂಲಕ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಾರ್ವಜನಿಕರಿಗೆ ಪರೋಕ್ಷವಾಗಿ ತಿಳಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕಾನೂನುಗಳನ್ನು ಗಾಳಿಗೆ ತೂರಿದ ಕಂಪನಿಗಳನ್ನು ಬಂದ್ ಮಾಡಬೇಕು. ಮುಂದೆ ಬರುವ ಯಾವುದೇ ರಾಸಾಯನಿಕ ಕಂಪನಿಗಳಿಗೆ ಅವಕಾಶಗಳನ್ನು ನೀಡಬಾರದು.

ಶಿವುಕುಮಾರ ಪೊರ್ಲ, ಕಡೇಚೂರು ನಿವಾಸಿ.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ