ಕನ್ನಡಪ್ರಭ ವಾರ್ತೆ ಯಾದಗಿರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇಲ್ಲ, ಸಲ್ಲದ ಆರೋಪಗಳನ್ನು ಮಾಡಿ ದೇವರ ಮತ್ತು ಗುರುವಿನ ಹೆಸರಿಗೆ ಕಳಂಕ ತರಲು ಸತತವಾಗಿ ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ, ಜಿಲ್ಲೆಯಲ್ಲಿನ ಧರ್ಮಸ್ಥಳದ ಸಾವಿರಾರು ಭಕ್ತರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಇಲ್ಲಿನ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಿಂದ ಮೆರವಣಿಗೆ ಮೂಲಕ ಹೊರಟ ಅಪಾರ ಭಕ್ತರು ಸುಮಾರು ಎರಡು ಕಿ.ಮೀ. ದೂರದವರೆಗೆ ಸಾಗಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡರು. ಸೌಜನ್ಯಾಳಿಗೆ ನ್ಯಾಯ ಕೊಡಿಸುವ ನೆಪದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ, ಸಮೀರ್ ಎಂ.ಡಿ., ಸಂತೋಷ ಶೆಟ್ಟಿ, ಜಯಂತ್ ಟಿ., ಅಯಜ್ ಅಂಚನ್ ಮುಂತಾದವರು ಷಡ್ಯಂತ್ರ ರೂಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿಯೊಬ್ಬ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿರುವುದು ಸ್ವಾಗತ. ಆದರೆ, ಈ ತಂಡಕ್ಕೆ ಏನಾದರೂ ಸಿಕ್ಕಿದೆಯೇ? ಹಾಗಾದರೆ, ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಹರಿಬಿಡುತ್ತಿರುವವರ ಬಗ್ಗೆ ಕ್ರಮ ಏಕಿಲ್ಲ? ಎಂದು ಪ್ರಶ್ನಿಸಿದರು.ದಕ್ಷಿಣದ ಕಾಶಿಯೆಂದೇ ಹೆಸರು ಪಡೆದಿರುವ ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೂ ಮತ್ತು ಗುರುಗಳಾದ ಹೆಗ್ಗಡೆ ಅವರ ಬಗ್ಗೆ ಕೀಳುಮಟ್ಟದ ಭಾಷೆ ಉಪಯೋಗಿಸಿ ವಿಡಿಯೋ ತುಣುಕುಗಳನ್ನು ಹರಿಬಿಡಲಾಗುತ್ತಿದೆ. ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದರೂ ಮೌನಕ್ಕೆ ಶರಣರಾಗಿರುವ ಸಿಎಂ ಸಿದ್ದರಾಮಯ್ಯ ಆ ವ್ಯಕ್ತಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನಾ ಅನಪುರ, ವೀರಭಾರತಿ ಪ್ರತಿಷ್ಠಾನದ ಅಧ್ಯಕ್ಷ ವೈಜನಾಥ ಹಿರೇಮಠ, ಯುವ ವಕೀಲ ನಾಗರಾಜ ಬೀರನೂರ ಮುಂತಾದವರು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಾಂತಪ್ಪ ಕಾನಳ್ಳಿ, ಸ್ವಾಮಿದೇವ ದಾಸನಕೇರಿ, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ದೀಪಾ, ದುರ್ಗಾಬಾಯಿ, ನಮೀತಾ, ರೇಣುಕಾ, ಭಾನುಬೇಗಂ, ಶಬಾನಾ ಆಫ್ರಿನ್, ಸೂಗುರೇಶ ವಾರದ, ಪ್ರಕಾಶ ಅಂಗಡಿ ಮುಂತಾದವರು ಇದ್ದರು.