ನಾಗಮೋಹನದಾಸ್ ವರದಿ ತಿರಸ್ಕರಿಸಲು ಒತ್ತಾಯ

KannadaprabhaNewsNetwork |  
Published : Aug 14, 2025, 01:00 AM IST
13ಕೆಆರ್ ಎಂಎನ್ 7.ಜೆಪಿಜಿರಾಜ್ಯ ಬಲಗೈ ಜಾತಿಗಳ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. | Kannada Prabha

ಸಾರಾಂಶ

ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ವರದಿಯನ್ನು ಅಂಗೀಕರಿಸಿದಲ್ಲಿ ಅದರ ಪರಿಣಾಮವನ್ನು ಸರ್ಕಾರ, ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಎದುರಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ರಾಮನಗರ

ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಸಲ್ಲಿಸಿರುವ ಒಳಮೀಸಲಾತಿ ವರದಿಯು ಅವೈಜ್ಞಾನಿಕ, ಅಪೂರ್ಣ ಹಾಗೂ ದುರುದ್ದೇಶಪೂರಿತವಾಗಿದ್ದು, ರಾಜ್ಯ ಸರ್ಕಾರ ಆ ವರದಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ರಾಂಪುರ ನಾಗೇಶ್, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಲಗಿದ್ದು, ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಲಗೈ ಜಾತಿಗಳ ಒಕ್ಕೂಟದ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ವರದಿಯನ್ನು ಅಂಗೀಕರಿಸಿದಲ್ಲಿ ಅದರ ಪರಿಣಾಮವನ್ನು ಸರ್ಕಾರ, ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಎದುರಿಸಬೇಕಾಗುತ್ತದೆ. ಸಮುದಾಯದ ಎಲ್ಲಾ ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡುವವರೆಗೂ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಎಸ್ಸಿ/ಎಸ್ಟಿ ಜಾತಿ ಸಮೀಕ್ಷೆ ವೇಳೆ ಗಣತಿದಾರರಿಗೆ ಟ್ಯಾಬ್ ಗಳನ್ನು ನೀಡಿರಲಿಲ್ಲ. ಗಣತಿದಾರರು ತಮ್ಮ ಮೊಬೈಲ್‌ನಲ್ಲಿ ಆಯೋಗವು ಬಿಡುಗಡೆ ಮಾಡಿದ ಆಪ್ ಹಲವು ಗಣತಿದಾರರ ಮೊಬೈಲ್‌ನಲ್ಲಿ ಡೌನ್ಲೋಡ್ ಆಗದ ಕಾರಣ ಲಕ್ಷಾಂತರ ಕುಟುಂಬಗಳ ಸಮೀಕ್ಷೆಯ ನಂತರ ಸದರಿ ಆಪ್ ಅನ್ ಇನ್ ಸ್ಟಾಲ್ ಮಾಡಿದ್ದರಿಂದ ಮಾಹಿತಿ ರದ್ದಾಗಿದೆ ಎಂದರು.ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ ಗಣತಿದಾರರ ಬದಲು ಕುಟುಂಬದ ಇತರ ಸದಸ್ಯರು ತರಬೇತಿ ಇಲ್ಲದೇ ಗಣತಿ ಕೈಗೊಂಡಿದ್ದು, ಸಾವಿರಾರು ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯುವಂತಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಬೂತ್ ಗಳನ್ನು ತೆರೆಯದ ಕಾರಣ ಸಮೀಕ್ಷೆಯು ಎಲ್ಲಾ ಕುಟುಂಬಗಳನ್ನು ಸಮೀಕ್ಷಾ ವ್ಯಾಪ್ತಿಗೆ ತರಲಾಗಿಲ್ಲ. ಕೆಲವೆಡೆ ಸಮೀಕ್ಷೆ ನಡೆಸದೆ ಮನೆಗಳಿಗೆ ಕೇವಲ ಸ್ಟಿಕರ್ಗಳನ್ನು ಮಾತ್ರ ಅಂಟಿಸಲಾಗಿದೆ. 1.47 ಕೋಟಿ ಜನಸಂಖ್ಯೆ ಬದಲು 1.16 ಕೋಟಿಗೆ ಸೀಮಿತಗೊಳಿಸಿದ್ದು, ಆಯೋಗವು 1.05 ಕೋಟಿ ಜನಸಂಖ್ಯೆಯನ್ನು ಮಾತ್ರ ಸರ್ವೆ ಮಾಡಿದಂತಾಗಿದೆ ಎಂದು ನಾಗೇಶ್ ಹೇಳಿದರು.ಆದಿ-ಕರ್ನಾಟಕ , ಆದಿ-ದ್ರಾವಿಡ ಮತ್ತು ಆದಿ-ಆಂಧ್ರ ಎಂಬ ಜಾತಿಗಳ ಉಪ ಜಾತಿಗಳ ಮೂಲ ಜಾತಿಗಳನ್ನು ಗುರುತಿಸದೆ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಆದಿ-ಕರ್ನಾಟಕ , ಆದಿ-ಆಂಧ್ರ, ಆದಿ-ದ್ರಾವಿಡ ಜಾತಿಗಳ ಗುಂಪೇ ಹೊರತು ಜಾತಿಗಳಲ್ಲ. ಇಲ್ಲಿರುವ ಎಡ-ಬಲ ಸಮುದಾಯದ ಜನಸಂಖ್ಯೆಯನ್ನು ಗುರುತಿಸುವ ಬದಲು ಆಯೋಗವು ಜಾತಿಗಳೇ ಅಲ್ಲದ ಗುಂಪಿಗೆ ಶೇ.1ರಷ್ಟು ಮೀಸಲಾತಿ ನಿಗದಿಡಿಸಿದೆ. ಇಲ್ಲಿರುವ 4.74 ಲಕ್ಷ ಜನರು ಬಲಗೈ ಸಮುದಾಯಕ್ಕೆ ಸೇರಿದ್ದು, ಪ್ರತ್ಯೇಕ ಮೀಸಲಾತಿ ನೀಡಿರುವುದರಿಂದ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸಲು ದುರದ್ದೇಶದಿಂದ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಿಯೋಗದಲ್ಲಿ ಮುಖಂಡರಾದ ಶಿವಕುಮಾರಸ್ವಾಮಿ, ಚಲುವರಾಜು, ವೆಂಕಟೇಶ್, ಸಿ.ಶಿವಣ್ಣ, ಕೃಷ್ಣ, ಸುರೇಶ್, ಲೋಕೇಶ್, ಪ್ರಕಾಶ್ ಮತ್ತಿತರರು ಇದ್ದರು.

ಪ್ರಮುಖ ನಿರ್ಣಯಗಳು :

1. ನಾಗಮೋಹನ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ, ಅಪೂರ್ಣ, ದುರುದ್ದೇಶಪೂರಿತ ಹಾಗೂ ಅಧಿಕಾರದ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸುಗಳಾಗಿರುವುದರಿಂದ ಸದರಿ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು.

2. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ರೀತಿಯಲ್ಲಿ ವರದಿಯನ್ನು ಅಂಗೀಕರಿಸಿದ್ದಲ್ಲಿ ಅದರ ಪರಿಣಾಮವನ್ನು ಸರ್ಕಾರ , ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಎದುರಿಸಬೇಕಾಗುತ್ತದೆ.

3. ವರದಿ ಅಂಗೀಕರಿಸಿದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ನೀಡುವವರೆಗೂ ಬಲಗೈ ಸಮುದಾಯ ಉಗ್ರ ಹೋರಾಟವನ್ನು ರೂಪಿಸುತ್ತದೆ.13ಕೆಆರ್ ಎಂಎನ್ 7.ಜೆಪಿಜಿ

ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್