ಕನ್ನಡಪ್ರಭ ವಾರ್ತೆ ರಾಮನಗರ
10,000 ಗೌರವಧನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಪ್ರತಿಭಟನಾ ಸ್ಥಳದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಮಳೆಯನ್ನು ಲೆಕ್ಕಿಸದೆ ಛತ್ರಿ ಹಿಡಿದು ಧರಣಿ ಮುಂದುವರೆಸಿದರು.ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಲ್ಕು ದಿನಗಳ ಹೋರಾಟ ಕೈಗೊಂಡಿದ್ದಾಗ ಸ್ಥಳಕ್ಕಾಗಮಿಸಿದ್ದ ಮುಖ್ಯಮಂತ್ರಿಗಳು 10 ಸಾವಿರ ರು. ಗೌರವಧನ ಗ್ಯಾರಂಟಿ ಮಾಡುತ್ತೇವೆ. ಮುಂಬರುವ ಬಜೆಟ್‌ನಲ್ಲೇ ಘೋಷಿಸುವುದಾಗಿ ಭರವಸೆ ನೀಡಿದ್ದರು. ಇದಾಗಿ 7 ತಿಂಗಳೇ ಕಳೆದರು ಕೊಟ್ಟ ಮಾತು ಈಡೇರಿಸುವುದಿರಲಿ ನಮ್ಮನ್ನು ಕೆಲಸದಿಂದ ತೆಗೆದುಹಾಕಿ ಬೀದಿಪಾಲು ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.
ಆಶಾ ಕಾರ್ಯಕರ್ತರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಪಿಎಫ್, ಇಎಸ್‌ಐ, ಗ್ರಾಚ್ಯುಟಿ ಇತ್ಯಾದಿ ಸಾಮಾಜಿಕ ಭದ್ರತೆಗಳನ್ನು ಖಚಿತಗೊಳಿಸಬೇಕು ಎಂದು ಐಎಲ್‌ಒ ಹಾಗೂ ಇತರ ಸಾಂವಿಧಾನಿಕ ಸಂಸ್ಥೆಗಳು ಶಿಫಾರಸು ಮಾಡಿರುವುದನ್ನು ಸರ್ಕಾರಗಳು ಅಲಕ್ಷಿಸುತ್ತಾ ಬಂದಿವೆ. ತಾಯಿ ಮಕ್ಕಳ ಆರೈಕೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಜನಜಾಗೃತಿ, ಪರಿಸರ ನೈರ್ಮಲ್ಯ ಹತ್ತಾರು ಸರ್ವೆ ಕೆಲಸ ಕಾರ್ಯಗಳನ್ನು ಹಗಲು ರಾತ್ರಿ ನಿರ್ವಹಿಸುವ ಮಹಿಳೆಯರಾದ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ನಾಯಕರು ಎಂಬ ಬಿರುದು ಸಹ ನೀಡಿದೆ. ಸರ್ಕಾರಗಳು ನಮ್ಮನ್ನು ಫ್ರಂಟ್‌ಲೈನ್ ವಾರಿಯರ್ಸ್ ಎಂದು ಶ್ಲಾಘಿಸಿವೆ. ಆದರೆ, ಘನತೆಯ ಬದುಕು ನಿರ್ವಹಿಸಲು ಅಗತ್ಯ ವೇತನ ದಿಂದ ಮಾತ್ರ ಸಂಪೂರ್ಣವಾಗಿ ವಂಚಿಸಲಾಗಿದೆ ಎಂದು ಕಿಡಿಕಾರಿದರು.ಆಶಾ ಕಾರ್ಯಕರ್ತೆ ಪ್ರತಿಭಾ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಳೆದ 17ವರ್ಷ ಹಗಲಿರುಳು ಸೇವೆ ಸಲ್ಲಿಸಿದ ಪರಿಣಾಮ ತಾಯಿ ಮರಣ ಶೇ.83, ಶಿಶು ಮರಣ ಶೇ.69, ಸಾಂಕ್ರಾಮಿಕ ಸಾವುಗಳು ಸೇರಿದಂತೆ ಇತರ ಸಾವಿನ ಪ್ರಮಾಣ ಶೇ.75ರಷ್ಟು ತಗ್ಗಿರುವುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೆ ಕೊರೋನ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವನದ ಹಂಗು ತೊರೆದು ಕೋಟ್ಯಂತರ ಜನರ ಪ್ರಾಣ ಉಳಿಸಿದ್ದಾರೆ. ಪ್ರಾಣದ ಹಮಗು ತೊರೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಮಗೆ ಕನಿಷ್ಟ ಗೌರವಧನ ನೀಡಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.
ಹಲವಾರು ವರ್ಷಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಬದಲು ದಮನಕಾರಿ ತಂತ್ರಗಳನ್ನು ಅನುಸರಿಸುತ್ತಿದೆ. ಇಲ್ಲಸಲ್ಲದ ಕಾರಣಗಳನ್ನು ನೀಡಿ ನಮ್ಮನ್ನು ಕೆಲಸಿದಂದ ವಜಾ ಮಾಡಲು ಹುನ್ನಾರ ನಡೆಸುತ್ತಿದೆ. ದುಡಿಯುವ ಮಹಿಳೆಯರ ಆತ್ಮಗೌರವದ ಬೆನ್ನೆಲುಬನ್ನು ಮುರಿಯಲು ಸಂಚು ಮಾಡುತ್ತಿದೆ ಎಂದು ಆರೋಪಿಸಿದರು.ಆಶಾ ಕಾರ್ಯಕರ್ತೆ ಜಯಲಕ್ಷ್ಮಿ ಮಾತನಾಡಿ, ಸರ್ಕಾರ ಈ ಹಿಂದೆ ಕೊಟ್ಟ ಮಾತನ್ನು ಉಳಿಸಿ ಕೊಳ್ಳಬೇಕು. ಮಾಸಿಕ ಕನಿಷ್ಟ 10 ಸಾವಿರ ರು. ಗೌರವಧನ ಖಚಿತಪಡಿಸುವ ಜತೆಗೆ ಪ್ರೋತ್ಸಾಧನ ನೀಡುವ ಆದೇಶ ಹೊರಡಿಸಬೇಕು. ಬಜೆಟ್‌ನಲ್ಲಿ 10 ಸಾವಿರ ರು. ಗೌರವಧನ ಹೆಚ್ಚಳ ಮಾಡಬೇಕು. ಆಶಾ ಕಾರ್ಯಕರ್ತರು ಹಾಗೂ ಸುಗಮಕಾರರನ್ನು ಕೆಲಸದಿಂದ ಕೈಬಿಡುವ ಕ್ರಮಗಳನ್ನು ಹಿಂಪಡೆಯಬೇಕು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತರಾದ ಚನ್ನಪಟ್ಟಣ ಸುಕನ್ಯಾ, ಶಿವಲಿಂಗಮ್ಮ, ರಾಮನಗರ ತುಳಸಮ್ಮ, ಬೇಬಿ, ಕನಕಪುರ ಸರೋಜ ಸೇರಿದಂತೆ ಗೀತಾ, ಜಯಶ್ರೀ ಮೀನಾಕ್ಷಮ್ಮ ಮತ್ತಿತರರು ಭಾಗವಹಿಸಿದ್ದರು.------
ಬೇಡಿಕೆಗಳು ಏನೇನು?1.ಏಪ್ರಿಲ್‌ನಿಂದ ಅನ್ವಯವಾಗುವಂತೆ 10 ಸಾವಿರ ಗೌರವಧನ ಆದೇಶ ಹೊರಡಿಸಬೇಕು.2.ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು.3.ಆಶಾ ಕಾರ್ಯಕರ್ತೆಯರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡಬಾರದು.4. ಅವೈಜ್ಞಾನಿಕ ಪರ್ಫಾರ್ಮೆನ್ಸ್ ಅಪ್ರೆಂಟಿಸ್ ಕೈ ಬಿಡಬೇಕು.5.ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು.6.ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು.7. 2025ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹ ಧನವನ್ನು ಜಾರಿಗೊಳಿಸಬೇಕು.8.ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು.13ಕೆಆರ್ ಎಂಎನ್ 1,2.ಜೆಪಿಜಿರಾಮನಗರದಲ್ಲಿ ಆಶಾ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.
--------------------------------------