ನರಗುಂದ: ಕಳೆದ ಹಲವು ದಿನಗಳಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡುವಂತೆ ಹೋರಾಟ ಮಾಡಿದರೂ ಆಡಳಿತರೂಢ ಸರ್ಕಾರಗಳು ಯೋಜನೆ ಜಾರಿ ಮಾಡದ ಹಿನ್ನೆಲೆ ಆ.15ರ ನಂತರ ದೆಹಲಿ ಅರಣ್ಯ ಇಲಾಖೆ ಮುಂದೆ ಧರಣಿ ಪ್ರಾರಂಭಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.ಅವರು ಗುರುವಾರ ಪಟ್ಟಣದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ನಡೆದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ಮಾತನಾಡಿ, ಬಂಡಾಯದ ನೆಲ ನರಗುಂದದಲ್ಲಿ ಕಳೆದ 11 ವರ್ಷಗಳಿಂದ ಹೋರಾಟ ಮಾಡಿದರೂ ಸಹ ಕೇಂದ್ರ ಸರ್ಕಾರ ಯೋಜನೆ ಜಾರಿ ಮಾಡದೇ ಈ ಭಾಗದ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
3.9 ಟಿಎಂಸಿ ನೀರು ಬಳಕೆ ಮಾಡಲು ನ್ಯಾಯಾಧಿಕರಣದ ನ್ಯಾಯಾಧೀಶರು ಹಾಗೂ ಕೋರ್ಟ್ ಅನುಮತಿ ನೀಡಿದರೂ ಸಹ ವನ್ಯಜೀವಿಗಳ ಇಲಾಖೆ ಯೋಜನೆ ಕಾಮಗಾರಿಗೆ ಪರವಾನಗಿ ನೀಡದ ಹಿನ್ನೆಲೆ ಆ. 15ರ ನಂತರ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಸಾವಿರಾರು ರೈತರು ದೆಹಲಿ ಚಲೋ ಹಮ್ಮಿಕೊಂಡು ದೆಹಲಿ ಅರಣ್ಯ ಇಲಾಖೆ ಮುಂದೆ ಯೋಜನೆ ಜಾರಿಗೆ ಧರಣಿ ನಡೆಸಲಾಗುವುದು ಎಂದರು.
ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗೆ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಆದೇಶ ಮಾಡಬೇಕೆಂದು ಹೋರಾಟ ಮಾಡಿದ್ದರಿಂದ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ. ಈಗಾಗಲೇ ನ್ಯಾಯಾಲಯ ಕಡ್ಡಾಯವಾಗಿ ರೈತರು ಬೆಳೆದ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕೆಂದು ಆದೇಶ ಮಾಡಿದೆ. ಆದರಿಂದ ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಎರಡು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಒಂದು ವೇಳೆ ಪ್ರಾರಂಭಿಸದಿದ್ದರೆ ಮತ್ತೆ ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.
ಹೇಗಾದರೂ ಮಾಡಿ ಖಾಸಗಿಯವರ ಮೂಲಕ ನರಗುಂದ ಮಹದಾಯಿ ಹೋರಾಟ ವೇದಿಕೆಯನ್ನು ಕೀಳಿಸಲು ರಾಜಕಾರಣಿಗಳು ಕುತಂತ್ರ ಮಾಡುತ್ತಿದ್ದು, ಅವರ ಕುತಂತ್ರಕ್ಕೆ ನಾವು ಬಗ್ಗುವದಿಲ್ಲ.ನಾವು ಈ ಜಾಗೆಯಲ್ಲಿ ಯೋಜನೆ ಜಾರಿ ಆಗುವರೆಗೆ ಮಾತ್ರ ಹೋರಾಟ ಮಾಡುತ್ತೇವೆ, ನಂತರ ಬಿಟ್ಟು ಹೋಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಡಾ. ಗುರುಬಸವ ಶ್ರೀಗಳು, ಶಿವಪ್ಪ ಹೊರಕೇರಿ, ಮಲ್ಲಣ್ಣ ಅಲೇಕಾರ, ಗುರು ರಾಯನಗೌಡ್ರ, ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಶೇಖಣ್ಣ ಪಡಯಪ್ಪನವರ, ಸಿ.ಎಸ್. ಪಾಟೀಲ, ಅಶೋಕ ಸಾತಣ್ಣವರ, ತಿಪ್ಪಣ್ಣ ಮೇಟಿ, ಹನಮಂತ ಸರನಾಯ್ಕರ, ಆನಂದಮ್ಮ ಹಿರೇಮಠ, ಅನಸವ್ವ ಶಿಂಧೆ, ನಾಗರತ್ನ ಸವಳಭಾವಿ, ಅರ್ಜುನ ಮಾನೆ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಇದ್ದರು.