ಪಾನಿಪುರಿ ಹಾಗೂ ಮಸಾಲೆ ಪುರಿಯಲ್ಲೂ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಬಳಕೆ ದೃಢಪಟ್ಟಿದ್ದು, ಸದ್ಯದಲ್ಲೇ ಪಾನಿಪುರಿ, ಮಸಾಲೆಪುರಿಯಲ್ಲಿ ಬಳಸುವ ರಾಸಾಯನಿಕಗಳನ್ನೂ ನಿಷೇಧಿಸುವ ಸಾಧ್ಯತೆಯಿದೆ.
ಬೆಂಗಳೂರು : ರಾಜ್ಯದಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಹಾಗೂ ಕಬಾಬ್‌ಗಳಲ್ಲಿ ಬಳಸುವ ರಾಸಾಯನಿಕ ಬಣ್ಣಗಳ ಬಳಕೆ ನಿಷೇಧದ ಬೆನ್ನಲ್ಲೇ ಪಾನಿಪುರಿ ಹಾಗೂ ಮಸಾಲೆ ಪುರಿಯಲ್ಲೂ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಬಳಕೆ ದೃಢಪಟ್ಟಿದ್ದು, ಸದ್ಯದಲ್ಲೇ ಪಾನಿಪುರಿ, ಮಸಾಲೆಪುರಿಯಲ್ಲಿ ಬಳಸುವ ರಾಸಾಯನಿಕಗಳನ್ನೂ ನಿಷೇಧಿಸುವ ಸಾಧ್ಯತೆಯಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆ ಪಾನಿಪುರಿ ಹಾಗೂ ಮಸಾಲೆಪುರಿ ಮಾದರಿಗಳನ್ನು ಪರಿಶೀಲಿಸಿದ್ದು, ಇವುಗಳಿಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕೃತಕ ಬಣ್ಣ ಬಳಸುವುದು ದೃಢಪಟ್ಟಿದೆ.
ಸಂಗ್ರಹಿಸಲಾದ 260 ಮಾದರಿಗಳಲ್ಲಿ 41 ಮಾದರಿಗಳು ಅಸುರಕ್ಷಿತವೆಂದು ವರದಿ ಬಂದಿದೆ. ಅಷ್ಟೂ ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 19 ಮಾದರಿಗಳಲ್ಲಿ ಹಾನಿಕಾರಕ ರಾಸಾಯನಿಕ ಬಣ್ಣ ಬಳಸಲಾಗಿದೆ. ಈ ಪೈಕಿ 18 ಮಾದರಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ.
ಏನು ಅಪಾಯಕಾರಿ?:
ಮುಖ್ಯವಾಗಿ ಪಾನಿಪುರಿ, ಮಸಾಲೆ ಪುರಿಯಲ್ಲಿ ಬಳಸುವ ಖಟ್ಟಾ-ಮೀಠಾ ಸಾಸ್‌ಗಳಲ್ಲಿ ಆರೋಗ್ಯಕ್ಕೆ ಮಾರಕವಾಗಬಲ್ಲ ಹಾಗೂ ಹೊಟ್ಟೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ರಾಸಾಯನಿಕಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್, ಪಾನಿಪುರಿ ಹಾಗೂ ಮಸಾಲೆಪುರಿ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರಿಂದ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ. ಇವುಗಳಲ್ಲಿ ನಿಷೇಧಿತ ರಾಸಾಯನಿಕಗಳು ಬಳಕೆಯಾಗುತ್ತಿರುವುದು ಕಂಡು ಬಂದಿದ್ದು, ಆರೋಗ್ಯ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡಲಾಗುವುದು. ಅವರು ಪರಿಶೀಲಿಸಿ ನಿಷೇಧ ಮಾಡುವ ಸಾಧ್ಯತೆಯಿದೆ ಎಂದಿದ್ದಾರೆ.
ಕ್ಯಾನ್ಸರ್ ಬರಬಹುದು!
ಪಾನಿಪುರಿ, ಮಸಾಲೆ ಪುರಿಯಲ್ಲಿ ಬಳಸುವ ಖಾರದ ಸಾಸ್‌ಗಳ ಬಳಕೆಯಿಂದ ಎದೆಯುರಿ ಉಂಟಾಗುತ್ತದೆ. ಸತತವಾಗಿ ಸೇವಿಸಿದರೆ ಗ್ಯಾಸ್ಟ್ರೋಎಂಟಾಲಜಿಸ್ಟ್ ಸಮಸ್ಯೆಗಳು, 5-7 ವರ್ಷ ಸೇವಿಸಿದರೆ ಅಲ್ಸರ್ ಹಾಗೂ ಕ್ಯಾನ್ಸರ್‌ಗೆ ಕಾರಣವಾಗಬಹುದು.
-ಕೆ. ಶ್ರೀನಿವಾಸ್, ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ