ಅಂದು ಶವದಿಂದ ನೀರು ಹೊರಕ್ಕೆ<bha>;</bha> ಇಂದು ನೀರಿಗಾಗಿ ಪರದಾಟ..!

KannadaprabhaNewsNetwork | Published : Dec 9, 2023 1:15 AM

ಸಾರಾಂಶ

ಅಂದು ಕೆರೆಯಲ್ಲಿ ಯಾರೋ ಒಬ್ಬರು ಬಿದ್ದು ಮೃತಪಟ್ಟಿದ್ದಾರೆ ಎಂದು ಆ ನೀರನ್ನೆಲ್ಲ ಹೊರಹಾಕಿದ್ದರು. ಇಂದು ಕುಡಿಯಲು ನೀರಿಲ್ಲದೇ ಗ್ರಾಮಸ್ಥರೆಲ್ಲ ಪರದಾಡುವಂತಹ ಪರಿಸ್ಥಿತಿ ಬಂದೋದಗಿದೆ.!

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಂದು ಕೆರೆಯಲ್ಲಿ ಯಾರೋ ಒಬ್ಬರು ಬಿದ್ದು ಮೃತಪಟ್ಟಿದ್ದಾರೆ ಎಂದು ಆ ನೀರನ್ನೆಲ್ಲ ಹೊರಹಾಕಿದ್ದರು. ಇಂದು ಕುಡಿಯಲು ನೀರಿಲ್ಲದೇ ಗ್ರಾಮಸ್ಥರೆಲ್ಲ ಪರದಾಡುವಂತಹ ಪರಿಸ್ಥಿತಿ ಬಂದೋದಗಿದೆ.!

ಇದು ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ ಕಥೆ ವ್ಯಥೆ. ಉಮಚಗಿ ಗ್ರಾಪಂ ಕೇಂದ್ರ ಸ್ಥಾನ. ಸರಿಸುಮಾರು 4500 ಜನಸಂಖ್ಯೆಯಿರುವ ಗ್ರಾಮ. ಇಲ್ಲಿ ಎರಡು ಕೆರೆಗಳಿವೆ. ಒಂದು ಚಿಕ್ಕಕೆರೆಯಾದರೆ ಒಂದು ದೊಡ್ಡ ಕೆರೆ. ಎರಡು ಕೆರೆಗಳು ಅಕ್ಕಪಕ್ಕದಲ್ಲೇ ಇವೆ. ಈ ಕೆರೆಗಳೇ ಜನರ ದಾಹ ತೀರಿಸುವುದು.

ಕಳೆದ ಮೇ 1ರಂದು ಈ ಊರಿನ ಸಂಕಪ್ಪ ಭರಮಪ್ಪ ಹುರಳಿ (60) ಎಂಬಾತ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ಈತ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದು ಮೊದಲಿಗೆ ಜನರಿಗೆ ಗೊತ್ತೇ ಆಗಿರಲಿಲ್ಲ. ಆತನ ಕುಟುಂಬಸ್ಥರು ಕೂಡ ಬೇರೆ ಬೇರೆಡೆಗಳಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ಈತನ ಬಗ್ಗೆ ವಿಚಾರಿಸಿದ್ದರು. ಆದರೂ ಪತ್ತೆ ಆಗಿರಲಿಲ್ಲ. ಎಲ್ಲೋ ಹೋಗಿರಬಹುದು. ಮರಳಿ ಬರುತ್ತಾನೆ ಎಂದುಕೊಂಡು ಆಗ ಸುಮ್ಮನಿದ್ದರು. ಈತನ ಶವವು ಮೇ 4ರಂದು ಕೆರೆಯಲ್ಲಿ ಪತ್ತೆಯಾಗಿತ್ತು. ಆದರೆ ಬಿದ್ದು ಮೂರ್ನಾಲ್ಕು ದಿನಗಳ ಕಾಲ ಕೆರೆಯಲ್ಲೇ ಈತನ ಶವವಿತ್ತು. ಶವವನ್ನು ಮೀನು ತಿಂದಿದ್ದರಿಂದ ಸಂಪೂರ್ಣ ಕೊಳೆತುಹೋಗಿತ್ತು. ಈತನ ಶವ ತೇಲುತ್ತಿರುವುದನ್ನು ಅಲ್ಲಿನ ಜನರು ಕಣ್ಣಾರೆ ಕಂಡಿದ್ದರು.

ಆಗ ಊರಿನ ಜನರೆಲ್ಲ ಈ ಕೆರೆಯ ನೀರನ್ನು ನಾವು ಕುಡಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ನೀರಿನ ಪರೀಕ್ಷೆಯನ್ನು ಗ್ರಾಪಂ ಮಾಡಿಸಿತ್ತು. ಕುಡಿಯಲು ನೀರು ಯೋಗ್ಯವಾಗಿದೆ. ಯಾವುದೇ ಬ್ಯಾಕ್ಟೀರಿಯಾ ಇಲ್ಲ ಎಂದು ವರದಿ ಕೂಡ ಬಂದಿತ್ತು. ಆದರೂ ಜನರಿಗೆ ಮಾತ್ರ ಈ ನೀರು ಕುಡಿಯಲು ಮನಸ್ಸಾಗುತ್ತಿಲ್ಲ. ಕೆರೆಯಲ್ಲೇ ಮೃತದೇಹ ಕಂಡ ಮೇಲೆ ಅದೇ ನೀರನ್ನು ಕುಡಿಯುವುದಾದರೂ ಹೇಗೆ? ಮೊದಲು ಈ ಕೆರೆಯ ನೀರನ್ನು ಹೊರಹಾಕಿ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಜನರ ಒತ್ತಡಕ್ಕೆ ಮಣಿದು ಕೆರೆಯ ನೀರನ್ನೆಲ್ಲ ಹೊರಹಾಕಿಸಲಾಗಿತ್ತು. ಇದರಿಂದ ಕೆರೆಯ ನೀರೆಲ್ಲ ಸಂಪೂರ್ಣ ಖಾಲಿಯಾಗಿತ್ತು.

ಆಗ ಇನ್ನು ಮಳೆಗಾಲವಿತ್ತು. ಹೀಗಾಗಿ ಮಳೆ ಬಂದು ಕೆರೆ ಮತ್ತೆ ಭರ್ತಿಯಾಗುತ್ತದೆ. ಕೆರೆ ಭರ್ತಿಯಾದರೆ ಕುಡಿಯುವ ನೀರಿನ ಸಮಸ್ಯೆಯಾಗಲ್ಲ ಎಂಬ ವಿಶ್ವಾಸ ಜನರಿಗಿತ್ತು. ಆದರೆ ಮಳೆ ಬಾರದೇ ಎಲ್ಲೆಡೆ ಬರದ ಛಾಯೆ ಆವರಿಸಿತು. ಇತ್ತ ಖಾಲಿಯಾದ ಕೆರೆಗೂ ನೀರು ಬರಲೇ ಇಲ್ಲ. ಇನ್ನು ಪಕ್ಕದಲ್ಲಿನ ಕೆರೆಯಲ್ಲಿನ ನೀರು ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಕೆರೆಯಲ್ಲಿ ನೀರು ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಅಂದು ಯಾಕಾದರೂ ಕೆರೆಯ ನೀರನ್ನು ಖಾಲಿ ಮಾಡಿಸಿದೇವು ಎಂಬ ಗ್ರಾಮಸ್ಥರ ಮರಗುವಂತಾಗಿದೆ.

ಪರಿಹಾರವೇನು?

ಅಂದು ಗ್ರಾಮಸ್ಥರಿಗೆ ಸಾಕಷ್ಟು ಹೇಳಿದರೂ ಕೇಳಲಿಲ್ಲ. ಕೆರೆಯ ನೀರನ್ನು ಕುಡಿಯಲ್ಲ ಎಂದು ಪಟ್ಟು ಹಿಡಿದರು. ಇದೀಗ ಕೆರೆಯಲ್ಲಿ ನೀರಿಲ್ಲ. ಹೀಗಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಯೋಚಿಸಲಾಗುತ್ತಿದೆ. ನಾಲ್ಕು ಟ್ಯಾಂಕರ್‌ ಮೂಲಕ 24 ಸಾವಿರ ಲೀಟರ್‌ ಪ್ರತಿದಿನ ಸರಬರಾಜು ಮಾಡಲಾಗುವುದು ಎಂದು ತಾಪಂ ತಿಳಿಸುತ್ತದೆ.

ಒಟ್ಟಿನಲ್ಲಿ ಅಂದು ಶವ ಕಂಡು ಬಂದಿದ್ದರಿಂದ ಕೆರೆಯ ನೀರು ಹೊರಕ್ಕೆ ಬಿಟ್ಟು ಇದೀಗ ಕುಡಿಯಲು ನೀರು ಸಿಗದೇ ಪರದಾಡುವಂತಾಗಿರುವುದಂತೂ ಸತ್ಯ.

ಈ ಕುರಿತು ಹುಬ್ಬಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಪ್ರತಿಕ್ರಿಯಿಸಿ

ಕೆರೆಯ ನೀರು ಹೊರಕ್ಕೆ ಹಾಕಲಾಗಿತ್ತು. ಮಳೆಯಾಗದ ಕಾರಣ ಕೆರೆ ತುಂಬಲಿಲ್ಲ. ಇದೀಗ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಇನ್ನೆರಡ್ಮೂರು ದಿನಗಳಲ್ಲಿ ನಾಲ್ಕು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.

Share this article