ಆಲೂರು ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಸ್ಥಳ ಪರಿಶೀಲನೆ

KannadaprabhaNewsNetwork | Published : Dec 9, 2023 1:15 AM

ಸಾರಾಂಶ

ಬೆಂಗಳೂರು-ಮಂಗಳೂರು ಮಾರ್ಗವಾಗಿ ಚಲಿಸುವ ರೈಲುಗಳು ತಾಲೂಕು ಕೇಂದ್ರವಾದ ಆಲೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂದು ಇಲ್ಲಿನ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತ ಕುಮಾರ್ ಅವರು ದೆಹಲಿಯಲ್ಲಿ ರೈಲ್ವೆ ಸಚಿವಾಲಯಕ್ಕೆ ನೀಡಿದ್ದ ಮನವಿಯನ್ನಾಧರಿಸಿ, ಕೇಂದ್ರ ರೈಲ್ವೆ ಸಚಿವಾಲಯದ ನಿರ್ದೇಶನದಂತೆ ಕಮರ್ಷಿಯಲ್ ಇನ್‌ಸ್ಪೆಕ್ಟರ್‌ ಸಂತೋಷ್‌ರವರು ಶುಕ್ರವಾರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಬೆಂಗಳೂರು-ಮಂಗಳೂರು ಮಾರ್ಗವಾಗಿ ಚಲಿಸುವ ರೈಲುಗಳು ತಾಲೂಕು ಕೇಂದ್ರವಾದ ಆಲೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂದು ಇಲ್ಲಿನ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತ ಕುಮಾರ್ ಅವರು ದೆಹಲಿಯಲ್ಲಿ ರೈಲ್ವೆ ಸಚಿವಾಲಯಕ್ಕೆ ನೀಡಿದ್ದ ಮನವಿಯನ್ನಾಧರಿಸಿ, ಕೇಂದ್ರ ರೈಲ್ವೆ ಸಚಿವಾಲಯದ ನಿರ್ದೇಶನದಂತೆ ಕಮರ್ಷಿಯಲ್ ಇನ್‌ಸ್ಪೆಕ್ಟರ್‌ ಸಂತೋಷ್‌ರವರು ಶುಕ್ರವಾರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು ತಾಲೂಕಿನ ಸಂಪೂರ್ಣ ಮಾಹಿತಿ ನೀಡಿದರು. ತಾಲೂಕು ಸುಮಾರು ೨ ಲಕ್ಷ ಜನಸಂಖ್ಯೆಯೊಂದಿಗೆ ೪ ಹೋಬಳಿ, ೧೫ ಪಂಚಾಯತಿಗಳನ್ನು ಹೊಂದಿದೆ. ತಾಲೂಕು ಕೇಂದ್ರದಲ್ಲಿ ಪ್ರತಿದಿನ ಸುಮಾರು ೬೦೦ಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ಓಡಾಡುತ್ತವೆ. ಪದವಿ, ಪದವಿಪೂರ್ವ, ಮಹಿಳೆಯರ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಸುಸಜ್ಜಿತ ತಾಲೂಕು ಆಸ್ಪತ್ರೆ, ಬಸ್ ನಿಲ್ದಾಣ, ತಾಲೂಕು ಮಟ್ಟದ ಎಲ್ಲಾ ಕಚೇರಿಗಳು, ಪೊಲೀಸ್ ಠಾಣೆಯನ್ನು ಹೊಂದಿದೆ. ಪ್ರತಿದಿನ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ, ಕಾರ್ಮಿಕರು, ನೌಕರರು ಹಾಸನ ಇನ್ನಿತರ ಕೇಂದ್ರಗಳಿಗೆ ಓಡಾಡುತ್ತಾರೆ. ಬಹುತೇಕ ಸರ್ಕಾರಿ ನೌಕರರು ಹಾಸನದಿಂದ ತಾಲೂಕು ಕೇಂದ್ರಕ್ಕೆ ಬಂದು ಹೋಗುತ್ತಾರೆ. ತಾಲೂಕಿನಲ್ಲಿ ಮಹಾರಾಜನದುರ್ಗ, ಕೆಂಚಾಂಬಿಕೆ ದೇವಾಲಯ, ಕಿರಗಡಲು ಪಂಚಲಿಂಗೇಶ್ವರ ದೇವಾಲಯ, ಪಾರ್ವತಮ್ಮನ ಬೆಟ್ಟ, ಪಾಳ್ಯ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯ ಸೇರಿದಂತೆ ಅನೇಕ ಐತಿಹಾಸಿಕ ಪ್ರವಾಸಿ ಕೇಂದ್ರಗಳಿವೆ. ತಾಲೂಕು ಕೇಂದ್ರದಿಂದ ಬೆಂಗಳೂರು, ಮಂಗಳೂರು, ಮಡಿಕೇರಿ, ಬೇಲೂರು, ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸಲಾಗಿದೆ. ಜನರು ತೀವ್ರ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಬೆಂಗಳೂರು, ಮಂಗಳೂರು ಇನ್ನಿತರ ಕೇಂದ್ರಗಳಿಗೆ ತಲುಪಲು ಸದ್ಯ ಸಾರಿಗೆ ಬಸ್ಸನ್ನು ಬಳಸುತ್ತಿರುವುದರಿಂದ ರೋಗಿಗಳು ತೊಂದರೆಗೀಡಾಗುತ್ತಿದ್ದಾರೆ. ರೈಲಿನಲ್ಲಿ ಚಲಿಸಿದರೆ ರೋಗ ಉಲ್ಬಣವಾಗುವುದು ಕಡಿಮೆಯಾಗುತ್ತದೆ ಎಂದು ಸ್ಥಳೀಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ತಾ. ಅಧ್ಯಕ್ಷ ಎಚ್. ವಿ. ರಾಘವೇಂದ್ರ, ಸತೀಶ್ ರವರು ಮಾಹಿತಿ ನೀಡಿ ರೈಲುಗಳ ನಿಲುಗಡೆ ಮಾಡುವಂತೆ ಕೋರಿ ಮನವಿ ಮಾಡಿದರು.

ರೈಲು ನಿಲ್ದಾಣ ಬಸ್ ನಿಲ್ದಾಣದಿಂದ ಕೇವಲ ಒಂದು ಕಿ.ಮೀ. ದೂರವಿದೆ. ಸುಸಜ್ಜಿತ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್, ಟಿಕೆಟ್ ಕೌಂಟರ್ ಸೌಲಭ್ಯವಿದೆ. ರೈಲು ನಿಲ್ಲಲು ಸುಸಜ್ಜಿತ ಫ್ಲಾಟ್‌ಫಾರಂ ಇರುವುದನ್ನು ಸೂಚನ ಫಲಕದಲ್ಲಿ ಘೋಷಿಸಲಾಗಿದೆ.

ಸ್ಥಳೀಯ ಸತ್ಯ ಮಾಹಿತಿಯನ್ನು ಸಂಬಂಧಿಸಿದ ಮೇಲಧಿಕಾರಿಗಳಿಗೆ ಸಲ್ಲಿಸುವುದಾಗಿ ಸಂತೋಷ್ ತಿಳಿಸಿದರು.

Share this article