ಹಾವೇರಿ: ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಕನ್ನಡಿಗರಿಗೆ ರಾಜ್ಯದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿರುವುದನ್ನು ಕಂಡು ೧೯೮೩ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಅಧ್ಯಯನಕ್ಕೆ ಮುಂದಾದರು. ರಾಜ್ಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗ ಅವಕಾಶಗಳನ್ನು ಕನ್ನಡಿಗರಿಗೆ ದೊರಕುವಂತೆ ಮಾಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಿ ವರದಿ ನೀಡುವ ಜವಾಬ್ದಾರಿಯನ್ನು ಕೇಂದ್ರದಲ್ಲಿ ಸಚಿವರಾಗಿದ್ದ ಡಾ. ಸರೋಜಿನಿ ಮಹಿಷಿ ಅವರಿಗೆ ಒಪ್ಪಿಸಿದ್ದರು. ಕನ್ನಡಿಗರಿಗೆ ನ್ಯಾಯವಾಗಿ ಉದ್ಯೋಗಾವಕಾಶಗಳು ದೊರಕಬೇಕೆಂದು ಡಾ. ಮಹಿಷಿ ಅವರು ವರದಿ ನೀಡಿದ್ದರು. ಆದರೆ ಈಗಿನ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ವರದಿಯನ್ನು ಇಂದಿಗೂ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಡಾ. ಸರೋಜಿನಿ ಮಹಿಷಿ ವರದಿ ನಿರ್ಲಕ್ಷ್ಯ ಸರಿಯಲ್ಲ. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರ ಆನಂತರ ಬಂದ ಎಲ್ಲ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಹುಸಿ ಭರವಸೆ ನೀಡುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಕನ್ನಡಪರ ಹೇಳಿಕೆಗಳನ್ನು ನೀಡಿದ್ದಾರೆಯೇ ವಿನಃ ಕನ್ನಡಿಗರಿಗೆ ನ್ಯಾಯಯುತವಾಗಿ ಸಿಗಬೇಕಾದ ಉದ್ಯೋಗ ಕೊಡಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.ಆಂಧ್ರ ಸರ್ಕಾರದ ಮಾದರಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕನ್ನಡಿಗರಿಗೆ ಸ್ಥಳೀಯವಾಗಿ ಶೇ. ೯೦ ಮೀಸಲಾತಿ ಕಲ್ಪಿಸಬೇಕು. ಸ್ಥಳೀಯ ಐಟಿಬಿಟಿ ಕಂಪನಿಗಳಲ್ಲಿ ಉನ್ನತ ಹುದ್ದೆ ಕಲ್ಪಿಸಿಕೊಟ್ಟು ಹೊರ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬೇಕು. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕಾರ್ಯಕರ್ತರ ಜತೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಉಪಾಧ್ಯಕ್ಷ ಮಹ್ಮದ್ ಯುಸೂಫ ಸೈಕಲಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮರಾಟೆ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸಾವಿತ್ರಿ ಬಡಿಗೇರ, ಜಿಲ್ಲಾ ಪ್ರಧಾನ ಸಂಚಾಲಯ ದ್ಯಾಮಣ್ಣ ಮಲ್ಲಾಡದ, ಜಿಲ್ಲಾ ಸಂಚಾಲಕ ಮಾಲತೇಶ ಜಿ.ಕೆ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಕುಮಾರ ದೊಡ್ಡಮನಿ, ಕುಮಾರ ಸುಳ್ಳನವರ, ಬಸವಣ್ಣಯ್ಯ ಹಳ್ಳಿಕೊಪ್ಪದಮಠ, ರಾಮಚಂದ್ರಪ್ಪ ಹಿಂಡಸಗಟ್ಟಿ, ಫಕ್ಕೀರಯ್ಯ ವಸ್ತ್ರದಮಠ, ತಿಪ್ಪೇಶ ನಡುವಿನಕೇರಿ, ರಾಮು ಗೌಳಿ, ಶೇಖಪ್ಪ ದೀಪಾವಳಿ, ವೀರೇಶ ಅಂಗಡಿ, ರಮೇಶ ನಡುವಿನಕೇರಿ ಇತರರು ಇದ್ದರು.