)
ಅಕ್ರಮ ಬ್ಲಾಸ್ಟಿಂಗ್, ಹಣ ವಸೂಲಿ: ಪರಿಶಿಷ್ಟರ ಆರೋಪ
ಇತ್ತೀಚೆಗೆ ಸರ್ಕಾರಿ ಜಾಗ ಒತ್ತುವರಿಯಿಂದ ಭಾರಿ ಸುದ್ದಿಯಾಗಿದ್ದ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿಯಲ್ಲಿ ಈಗ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ದಾಖಲಾಗಿದೆ.
ಹಿರೀಕಾಟಿ ಗ್ರಾಮದ ಹರಿಜನ, ಗಿರಿಜನ ಮತ್ತು ಇತರೆ ಅರೆಬಂಡ ಕೆಲಸಗಾರರ ಸಂಘದ ಪದಾಧಿಕಾರಿಗಳು ಗ್ರಾಮದ ಸ.ನಂ.೧೦೮ ರ ಕ್ವಾರಿ ಜಾಗದಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮದ ಪರಿಶಿಷ್ಟರು ಇಲ್ಲಿನ ತಹಶೀಲ್ದಾರ್‌ಗೆ ಲಿಖಿತ ದೂರು ಸಲ್ಲಿಸಿದ್ದಾರೆ.ಹಿರೇಕಾಟಿ ಗ್ರಾಮದ ಪರಿಶಿಷ್ಟ ಜನಾಂಗದ ಗ್ರಾಮಸ್ಥರು ನೀಡಿದ ದೂರಿನ ಪ್ರಕಾರ ಹರಿಜನ, ಗಿರಿಜನ ಮತ್ತು ಇತರೆ ಅರೆ ಬಂಡೆ ಕೆಲಸಗಾರರ ಸಂಘ ಸ.ನಂ.೧೦೮ರಲ್ಲಿ ೨.೧೬ ಎಕರೆ ಜಾಗ ಗುತ್ತಿಗೆಗೆ ಪಡೆದುಕೊಂಡಿದ್ದಾರೆ. ಆದರೆ ಗುತ್ತಿಗೆ ಪಡೆದ ಜಾಗಕ್ಕಿಂತಲೂ ಹೆಚ್ಚುವರಿಯಾಗಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಂಘದ ಕಾರ್ಯದರ್ಶಿಯೇ ಸಂಘದ ಸಭೆಯೊಂದರಲ್ಲಿ ಹೇಳಿದ ಮಾತಿನಂತೆ ನಾವು ಮಾಡುವುದು ಶೇ.೯೦ರಷ್ಟು ಅಕ್ರಮ ಗಣಿಗಾರಿಕೆಯೇ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಂಘದ ಅಕ್ರಮದ ಬಗ್ಗೆ ಸಹಕಾರ ಇಲಾಖೆ ಮತ್ತು ಗಣಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಗ್ರಾಮದ ಪರಿಶಿಷ್ಟರು ಮನವಿ ಮಾಡಿದ್ದಾರೆ.