ವಿಜೃಂಭಣೆಯಿಂದ ಜರುಗಿದ ಶ್ರೀ ಚಾಮುಂಡೇಶ್ವರಿ ವರ್ಧಂತ್ಯುತ್ಸವ

KannadaprabhaNewsNetwork |  
Published : Aug 05, 2026, 01:30 AM IST
೪ಕೆಎಂಎನ್‌ಡಿ-೬ಮಂಡ್ಯದ ಶ್ರೀ ಚಾಮುಂಡೇಶ್ವರಿ ನಗರದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವರ್ಧಂತ್ಯುತ್ಸವದಲ್ಲಿ ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಶ್ರೀಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ರಸ್ತೆ ಬದಿಯಲ್ಲಿ ದೇವಿಯ ಚಿತ್ರವಿರುವ ವಿದ್ಯುತ್ ದೀಪಾಲಂಕಾರ ಅಕರ್ಷಕವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡಿನ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಇಲ್ಲಿನ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ಮಹಾನ್ಯಾಸ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಟಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಲಾಯಿತು.

ನಂತರ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಮಹಾ ಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಸಹಸ್ರಾರು ಮಂದಿ ದೇವಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ಉತ್ಸವ ಮೂರ್ತಿಯ ಉತ್ಸವವನ್ನೂ ನೆರವೇರಿಸಲಾಯಿತು.

ಶ್ರೀಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ರಸ್ತೆ ಬದಿಯಲ್ಲಿ ದೇವಿಯ ಚಿತ್ರವಿರುವ ವಿದ್ಯುತ್ ದೀಪಾಲಂಕಾರ ಅಕರ್ಷಕವಾಗಿತ್ತು. ಕಳೆದ ಎರಡು ದಿನಗಳ ಹಿಂದೆಯೇ ವಿದ್ಯುತ್ ದೀಪಾಲಂಕರಾದ ಸಿದ್ಧತೆಯನ್ನು ದೇವಾಲಯ ಆಡಳಿತ ಮಂಡಳಿ ಮಾಡಿತ್ತು.

ಆ.೭ರಂದು ಆಷಾಢ ಕೊನೇ ಶುಕ್ರವಾರದ ಅಂಗವಾಗಿಯೂ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಇಂದು ಮತ್ತು ನಾಳೆಯೂ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯುವುದರಿಂದ ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದೇವಾಲಯದ ಮುಂಭಾಗದಲ್ಲಿರುವ ಮಂಡ್ಯ-ಬನ್ನೂರು ರಸ್ತೆಯಲ್ಲಿ ಬ್ಯಾರಿಕೇಟ್‌ಗಳನ್ನು ಅಳವಡಿಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ. ಜೊತೆಗೆ ಸುಗಮ ಸಂಚಾರಕ್ಕೂ ಅನುವು ಮಾಡಿಕೊಡಲಾಗುತ್ತಿತ್ತು.

ನಗರದ ಚಿಕ್ಕೇಗೌಡನದೊಡ್ಡಿ ಬಡಾವಣೆಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲೂ ವಿಶೇಷ ಪೂಜಾ ಕಾರ್ಯಗಳು ನಡೆದವು. ಇಲ್ಲಿನ ಪೇಟೆಬೀದಿಯಲ್ಲಿರುವ ಮಾರುಕಟ್ಟೆ ಆವರಣದಲ್ಲಿರುವ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಶ್ರೀಚಾಮುಂಡೇಶ್ವರಿ ದೇವಿಗೆ ವರ್ಧಂತಿ ಅಂಗವಾಗಿ ಲಾಡು ಅಲಂಕಾರ

ಶ್ರೀರಂಗಪಟ್ಟಣ: ಪಟ್ಟಣದ ಚಾಮುಂಡೇಶ್ವರಿ ಬೀದಿಯ ಶ್ರೀಚಾಮುಂಡೇಶ್ವರಿ ದೇವಿಗೆ ವರ್ಧಂತಿ ಅಂಗವಾಗಿ ಲಾಡುನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.ದೇವಾಲಯದ ಅರ್ಚಕ ಲಕ್ಷ್ಮೀಶ್ ನೇತೃತ್ವದ ವೈದಿಕರ ತಂಡ ದೇವಿ ವರ್ಧಂತಿ ಅಂಗವಾಗಿ ಮಂಗಳವಾರ ಮುಂಜಾನೆಯಿಂದಲೂ ದೇವಿ ಗರ್ಭ ಗುಡಿ ಸೇರಿದಂತೆ ದೇವಿಗೆ ಲಾಡುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 5 ಸಾವಿರ ಲಾಡುಗಳ ಬಳಸಿ ಅಲಂಕರಿಸಿ, ಭಕ್ತರನ್ನೂ ಆಕರ್ಷಿಸಲಾಗಿತ್ತು.

ದೇವಾಲಯಕ್ಕೆ ಭಕ್ತರು ಆಗಮಿಸಿ ದೇವಿ ಅಲಂಕಾರ ವೀಕ್ಷಿಸಿ ಪುನೀತರಾದರು. ಬಂದ ಬಂದ ಭಕ್ತರಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದದ ಜೊತೆ ಲಾಡುಗಳನ್ನ ವಿತರಿಸಲಾಗುತ್ತಿತ್ತು. ಪಟ್ಟಣ ಅಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿಯ ಲಾಡು ಅಲಂಕಾರ ವೀಕ್ಷಣೆಗೆ ಭಕ್ತರ ದಂಡು ಆಗಮಿಸಿ ಸರತಿ ಸಾಲಿನಲ್ಲಿ ದೇವಿಯ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ದಿನಾಚರಣೆ ಆಚರಣೆ ಕುರಿತು ಪೂರ್ವಭಾವಿ ಸಭೆ
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಕೆಆರ್‌ಎಸ್‌ ಪ್ರತಿಭಟನೆ