ಲೀಡ್‌, ಕಾಮನ್‌ ಪುಟಕ್ಕೆ ಚಿನ್ನದ ಹುಡುಗಿ ಪ್ರಣವಿಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Oct 08, 2026, 01:15 AM IST
10 | Kannada Prabha

ಸಾರಾಂಶ

ರಸ್ತೆ ಉದ್ದಕ್ಕೂ ಅಭಿಮಾನಿಗಳು ಹಾಗೂ ಸಾರ್ವಜನಿಕರು ಪ್ರಣವಿ ಅರಸ್‌ಅವರಿಗೆ ಶುಭ ಕೋರಿದರು.

ಕನ್ನಡಪ್ರಭ ವಾರ್ತೆ ಮೈಸೂರುಏಷ್ಯನ್ ಗೇಮ್ಸ್‌ ನ ಗಾಲ್ಫ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಭರವಸೆಯ ಗಾಲ್ಫ್ ಪಟು, ಮೈಸೂರಿನ ಪ್ರಣವಿ ಎಸ್. ಅರಸ್ ಅವರನ್ನು ಮೈಸೂರು ರೇಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಭರ್ಜರಿ ರೋಡ್‌ಶೂ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.ಮೈಸೂರಿಗೆ ಆಗಮಿಸಿದ ಅವರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರಣವಿ ಅವರಿಗೆ ಮೈಸೂರು ಪೇಟ, ಹಾರ, ಶಾಲು ಹಾಕಿ ಅಭಿನಂದಿಸಿದರು.ಮೆರವಣಿಗೆಯು ಡಿ. ದೇವರಾಜ ಅರಸು ರಸ್ತೆ, ಜೆ.ಎಲ್‌.ಬಿ ರಸ್ತೆ, ಎಂ.ಜಿ ರಸ್ತೆ ಮೂಲಕ ರೇಸ್‌ ಕೋರ್ಸ್‌ ತಲುಪಿತು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.ರಸ್ತೆ ಉದ್ದಕ್ಕೂ ಅಭಿಮಾನಿಗಳು ಹಾಗೂ ಸಾರ್ವಜನಿಕರು ಪ್ರಣವಿ ಅರಸ್‌ಅವರಿಗೆ ಶುಭ ಕೋರಿದರು. ಅನೇಕರು ಸೆಲ್ಫಿ ತೆಗೆದುಕೊಂಡರು. ಈ ಅದ್ಧೂರಿ ಮೆರವಣಿಗೆಯಲ್ಲಿ ಮೈಸೂರು ರೇಸ್‌ ಕ್ಲಬ್‌ ಮತ್ತು ಗಾಲ್ಫ್‌ ಕ್ಲಬ್‌ ನ ಪದಾಧಿಕಾರಿಗಳು ಇದ್ದರು.ಬಳಿಕ ರೇಸ್‌ ಕ್ಲಬ್‌ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಣವಿ ಅರಸ್‌ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಣವಿ ಅವರು, ಗಾಲ್ಫ್ ಕೇವಲ ಶ್ರೀಮಂತರ ಆಟವಲ್ಲ. ಎಲ್ಲರೂ ಗಾಲ್ಫ್ ಆಡಬಹುದು. ಈ ಕ್ರೀಡೆಯಲ್ಲಿ ಹೆಚ್ಚು ಜನರು ತೊಡಗಿಸಿಕೊಳ್ಳಬೇಕು. ಚಿನ್ನದ ಪದಕ ಗೆದ್ದ ಬಳಿಕ ಗುರಿ ನಿಂತಿಲ್ಲ. ಮುಂದಿನ ಪಂದ್ಯಾವಳಿಗಳತ್ತ ಗಮನ ಹರಿಸಿದ್ದೇನೆ. ಎಲ್‌.ಟಿಎಫ್ ಪಂದ್ಯಾವಳಿ ತಮ್ಮ ಮುಂದಿನ ಗುರಿ. ಜತೆಗೆ ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತೇನೆ ಎಂದರು.ಪೋಷಕರು, ತರಬೇತುದಾರರು ಹಾಗೂ ಸೈಕಾಲಜಿಸ್ಟ್‌ ಗಳ ನಿರಂತರ ಶ್ರಮ ಇಲ್ಲದಿದ್ದರೆ ಏಷ್ಯನ್ ಗೇಮ್ಸ್‌ ನಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಕಷ್ಟದ ಹಂತಗಳಲ್ಲಿ ಪ್ರೋತ್ಸಾಹಿಸಿದ ಕುಟುಂಬದ ಬೆಂಬಲವೇ ನನ್ನ ಈ ಸಾಧನೆಗೆ ಮುಖ್ಯ ಕಾರಣ. ಪೈನಲ್‌ ನಲ್ಲಿ ದೇಶದ ರಾಷ್ಟ್ರಗೀತೆ ಮೊಳಗಬೇಕು ಎಂಬುದು ನನ್ನ ತಾಯಿಯ ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ಸಾಧ್ಯವಾಗಿದ್ದಕ್ಕೆ ನನಗೆ ಅತ್ಯಂತ ಸಂತಸವಿದೆ. ಇದು ನನ್ನೊಬ್ಬಳ ಗೆಲುವಲ್ಲ. ನನಗೆ ಪ್ರೋತ್ಸಾಹಿಸಿದ ಎಲ್ಲರ ಗೆಲುವು ಎಂದು ಭಾವುಕರಾಗಿ ನುಡಿದರು.ಗಾಲ್ಫ್ ಕೋರ್ಟ್‌ ಗಳು ನನ್ನ ಎರಡನೇ ಮನೆಯಂತೆ ಇತ್ತು. ಅಲ್ಲಿಯೇ ನಾನು ಸುದೀರ್ಘ ಸಮಯ ಕಳೆಯುತ್ತೇನೆ. ಕೆಜಿಎ ಹಾಗೂ ಸ್ಥಳೀಯ ಕ್ಲಬ್ ನೀಡಿದ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಗಾಲ್ಫ್ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ಬೆಳಗಿನ ಜಾವದಲ್ಲೇ ಎದ್ದು ನನ್ನ ಪಂದ್ಯಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದ ಎಲ್ಲಾ ಕ್ರೀಡಾಭಿಮಾನಿಗಳಿಗೆ ನಾನು ಆಭಾರಿ ಎಂದು ಅವರು ನುಡಿದರು.ತಮ್ಮ ಬೆಂಬಲಕ್ಕೆ ನಿಂತ ಕರ್ನಾಟಕ ಸರ್ಕಾರ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಮಿತಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ರೀಡೆಯನ್ನು ಉತ್ತೇಜಿಸಲು ಸಂಸ್ಥೆಗಳು ನೀಡುತ್ತಿರುವ ಸಹಕಾರ ಶ್ಲಾಘನೀಯ. ವಿಶೇಷವಾಗಿ ತಮ್ಮ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತ ಕ್ಲಬ್ ನಿರ್ವಹಣಾ ಮಂಡಳಿಗೆ ಅವರು ಧನ್ಯವಾದ ಅರ್ಪಿಸಿದರು.ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಕೆ.ಟಿ.ಬಾಲಕೃಷ್ಣ ಮಾತನಾಡಿ, ಏಷ್ಯನ್ ಗೇಮ್ಸ್‌ ನಲ್ಲಿ ಈ ರೀತಿಯ ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಪ್ರಣವಿ ಮೈಸೂರಿಗರು ಮಾತ್ರವಲ್ಲದೆ ಕರ್ನಾಟಕ ಹಾಗೂ ಭಾರತವೇ ಹೆಮ್ಮೆಪಡುವ ಆಟಗಾರ್ತಿ. ಪೋಷಕರ ಪ್ರೋತ್ಸಾಹ, ಶ್ರಮ ಹಾಗೂ ತ್ಯಾಗವೇ ಈ ಸಾಧನೆಗಳಿಗೆ ಕಾರಣ. ಕಿರಿಯ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಪ್ರಣವಿಗೆ ಸುದೀರ್ಘ ಕ್ರೀಡಾ ಭವಿಷ್ಯವಿದೆ. ಮುಂಬರುವ ದಿನಗಳಲ್ಲಿ ದೇಶಕ್ಕೆ ಹಾಗೂ ಮೈಸೂರಿಗೆ ಮತ್ತಷ್ಟು ಕೀರ್ತಿ ತರಲಿ ಎಂದು ಶುಭ ಕೋರಿದರು.ಮೈಸೂರು ರೇಸ್ ಕ್ಲಬ್ ಸ್ವೀವಾರ್ಡ್ ಜಿ.ಕೆ. ಬಾಲಕೃಷ್ಣನ್‌ ಮಾತನಾಡಿ, ಭಾರತಕ್ಕೆ ಮಹಿಳಾ ಗಾಲ್ಫ್ ವಿಭಾಗದಲ್ಲಿ ಚಾರಿತ್ರಿಕ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಜತೆಗೆ ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಗೆಲ್ಲುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. 6ನೇ ವಯಸ್ಸಿನಲ್ಲೇ ಗಾಲ್ಫ್ ಆಡಲು ಪ್ರಾರಂಭಿಸಿದ ಪ್ರಣವಿಗೆ ತಂದೆ ಶರತ್ ಚಂದ್ರ ರಾಜೇ ಅರಸ್ ಹಾಗೂ ಜಯರಾಜ್ ಅರಸ್ ಅವರ ಪ್ರೋತ್ಸಾಹ ದೊಡ್ಡದು. ಆಕೆಯ ತಾಯಿ ಕೈವಲ್ಯ ಅವರು ಖೋ- ಖೋ ಪಟುವಾಗಿ ರಾಜ್ಯವನ್ನು ಪ್ರತಿನಿಧಿಸಿದ್ದರೆ, ಆಕೆಯ ತಾತ ಸುಬ್ರಹ್ಮಣ್ಯ ರಾಜೇ ಅರಸ್ ಮತ್ತು ಅಜ್ಜಿ ಚಂದ್ರಬಾಯಿ ಅರಸ್ ಕೂಡ ಕ್ರೀಡಾ ಹಿನ್ನೆಲೆ ಉಳ್ಳವರಾಗಿದ್ದು, ಕುಟುಂಬದ ಕ್ರೀಡಾ ರಕ್ತವೇ ಪ್ರಣವಿ ಅವರ ಯಶಸ್ಸಿಗೆ ಕಾರಣ ಎಂದರು.2028ಕ್ಕೆ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಚಿನ್ನದ ಪದಕ ತರಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.1906ರಲ್ಲಿ ಮೈಸೂರು ರೇಸ್ ಕೋರ್ಸ್‌ ನಲ್ಲಿ ಗಾಲ್ಫ್ ಆಟದ ಪರಿಕಲ್ಪನೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ 1940ರಲ್ಲಿ ಅದನ್ನು ಪೋಷಿಸಿ ಬೆಳೆಸಿದ ಜಯಚಾಮರಾಜ ಒಡೆಯರ್ ಅವರ ಕೊಡುಗೆ ಸ್ಮರಣೀಯ ಎಂದರು.ಪ್ರಣವಿ ಪೋಷಕರಾದ ಶರತ್ ಚಂದ್ರ ರಾಜೇ ಅರಸ್, ಕೈವಲ್ಯ ಅರಸ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳುಪಿನಕಟ್ಟೆ ಬಳಿ ಹೈಕೋರ್ಟ್ ಪೀಠ ಸ್ಥಾಪಿಸಲು ಮನವಿ
ಕೂಡಲ ಸಂಗಮದಲ್ಲಿ ಗೋಮಾಂಸ ಭಕ್ಷಣೆ ವಿರುದ್ಧ ಸೂಕ್ತ ಕ್ರಮವಾಗಲಿ: ಮುತಾಲಿಕ್‌