ರೈತರಿಗೆ ಭತ್ತ ಕೊಯ್ಲಿನ ನಂತರ ಖಾಲಿ ಉಳಿಯುವ ಜಮೀನುಗಳಲ್ಲಿ ಉದ್ದು ಬೆಳೆ ಬೆಳೆಯುವುದರಿಂದ ಆರ್ಥಿಕ ಲಾಭಗಳಿಸಬಹುದು ಎಂದು ಕೆವಿಕೆ ಮುಖ್ಯಸ್ಧ ಡಾ.ಎನ್.ಟಿ. ನರೇಶ್ ತಿಳಿಸಿದರು.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ । ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಲು ಶಿಫಾರಸು
---
ಮುಖ್ಯಾಂಶಗಳು:
ಭತ್ತ ಕಟಾವಿನ ಬಳಿಕ ಉದ್ದು ಹಾಕುವುದರಿಂದ ರೈತರಿಗೆ ಆದಾಯ ಹೆಚ್ಚಳ
ಉದ್ದು ಬೆಳೆಯುವುದರಿಂದ ಜಮೀನಿನಲ್ಲಿ ಉತ್ಪಾದಕತೆ ಪ್ರಮಾಣ ಏರುಗತಿ
ವಾತಾವರಣದಲ್ಲಿನ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರಗೊಳಿಸಲು ಪೂರಕ
ಉದ್ದು ಬೆಳೆದ ನಂತರ ಮುಂದಿನ ಬಳೆಗೆ ಭೂಮಿಯ ಫಲವತ್ತತೆಯೂ ವೃದ್ಧಿ
ಬೆಳೆ ಪರಿವರ್ತನೆಯಿಂದ ಕೀಟ ಬಾಧೆ, ರೋಗಗಳ ಹಾವಳಿ ಭಾರಿ ಇಳಿಮುಖ
---
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರಿಗೆ ಭತ್ತ ಕೊಯ್ಲಿನ ನಂತರ ಖಾಲಿ ಉಳಿಯುವ ಜಮೀನುಗಳಲ್ಲಿ ಉದ್ದು ಬೆಳೆ ಬೆಳೆಯುವುದರಿಂದ ಆರ್ಥಿಕ ಲಾಭಗಳಿಸಬಹುದು ಎಂದು ಕೆವಿಕೆ ಮುಖ್ಯಸ್ಧ ಡಾ.ಎನ್.ಟಿ. ನರೇಶ್ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದಿಂದ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರೈತರ ಆದಾಯ ವೃದ್ಧಿ ಹಾಗೂ ಮಣ್ಣಿನ ಆರೋಗ್ಯ ಸಂರಕ್ಷಣೆಯ ಉದ್ದೇಶದಿಂದ ಭತ್ತದ ನಂತರ ಉದ್ದು ಬೆಳೆ ಪ್ರಾತ್ಯಕ್ಷಿಕೆ ಮತ್ತು ಸಮತೋಲಿತ ರಸಗೊಬ್ಬರ ಬಳಕೆಯ ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉದ್ದು ಒಂದು ದ್ವಿದಳ ಧಾನ್ಯ ಬೆಳೆ ಆಗಿದ್ದು, ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರಗೊಳಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮುಂದಿನ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಹೆಚ್ಚುವುದರ ಜೊತೆಗೆ ರೈತರಿಗೆ ಹೆಚ್ಚುವರಿ ಆದಾಯವೂ ದೊರೆಯುತ್ತದೆ. ಭತ್ತದ ನಂತರ ಉದ್ದು ಬೆಳೆ ಬೆಳೆಯುವುದರಿಂದ ಭೂಮಿಯ ಉತ್ಪಾದಕತೆ ಹೆಚ್ಚಿ, ಬೆಳೆ ಪರಿವರ್ತನೆಯಿಂದ ಕೀಟ ಹಾಗೂ ರೋಗಗಳ ಹಾವಳಿ ಕಡಿಮೆಯಾಗುತ್ತದೆ ಎಂದು ತಿಳಿಸಲಾಯಿತು.
ಆಹಾರ ಮತ್ತು ಪೌಷ್ಟಿಕ ಭದ್ರತೆಯಲ್ಲಿ ದ್ವಿದಳ ಧಾನ್ಯಗಳ ಮಹತ್ವ ಹೆಚ್ಚಾಗಿದ್ದು, ಉದ್ದು ಸೇರಿದಂತೆ ಕಾಳುಬೆಳೆಗಳು ಮಾನವನ ಆಹಾರದಲ್ಲಿ ಪ್ರೋಟೀನ್ ಪ್ರಮುಖ ಮೂಲವಾಗಿದ್ದು, ಆಹಾರ ಭದ್ರತೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ರೈತರು ಬೆಳೆ ಪದ್ಧತಿಯಲ್ಲಿ ಕಾಳುಬೆಳೆಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.ಮಣ್ಣು ವಿಜ್ಞಾನಿ ಡಾ. ಹನುಮಂತಪ್ಪ ಮೇಟಿ, ಅವರು ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ಮಣ್ಣಿನ ಪರೀಕ್ಷೆಯ ಮಹತ್ವದ ಕುರಿತು ವಿವರಿಸಿ, ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮಣ್ಣಿನ ಆರೋಗ್ಯ ಕಾಪಾಡಲು ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ ಎಂದು ಹೇಳಿದರು. ಕ್ಷೇತ್ರೋತ್ಸವದ ಅಂಗವಾಗಿ ಉದ್ದು ಬೆಳೆ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ರೈತರು ಬೆಳೆ ನಿರ್ವಹಣೆ, ಬೀಜೋಪಚಾರ, ಕೀಟ ಹಾಗೂ ರೋಗ ನಿರ್ವಹಣೆ ಕುರಿತಂತೆ ಮಾಹಿತಿ ಪಡೆದುಕೊಂಡರು. ರೈತರು ತಮ್ಮ ಜಮೀನುಗಳಲ್ಲಿ ಭತ್ತದ ನಂತರ ದ್ವಿದಳ ಧಾನ್ಯ ಬೆಳೆಗಳನ್ನು ಅಳವಡಿಸಿಕೊಳ್ಳುವಂತೆ ವಿಜ್ಞಾನಿಗಳು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಭತ್ತ, ಮೆಕ್ಕೆಜೋಳ ಹಾಗೂ ಕಬ್ಬು ಬೆಳೆಗಳಲ್ಲಿ ಸಮತೋಲಿತ ರಸಗೊಬ್ಬರ ಬಳಕೆಯ ಮಹತ್ವವನ್ನು ವಿಶೇಷವಾಗಿ ತಿಳಿಸಲಾಯಿತು. ಭತ್ತ ಬೆಳೆಯಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು ಸಮತೋಲಿತ ಪ್ರಮಾಣದಲ್ಲಿ ಹಂತ ಹಂತವಾಗಿ ನೀಡುವುದರಿಂದ ಹೆಚ್ಚಿನ ಇಳುವರಿ ಹಾಗೂ ಉತ್ತಮ ಗುಣಮಟ್ಟದ ಧಾನ್ಯ ಉತ್ಪಾದನೆ ಸಾಧ್ಯವಾಗುತ್ತದೆ. ಮೆಕ್ಕೆಜೋಳ ಬೆಳೆಯಲ್ಲಿ ಅಗತ್ಯ ಪೋಷಕಾಂಶಗಳ ಸಮರ್ಪಕ ನಿರ್ವಹಣೆಯಿಂದ ಉತ್ಪಾದಕತೆ ಹೆಚ್ಚುತ್ತದೆ. ಕಬ್ಬು ಬೆಳೆಯಲ್ಲಿ ಶಿಫಾರಸು ಮಾಡಿದ ಪ್ರಮಾಣದ ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತಿಳಿಸಲಾಯಿತು.ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಕಚೇರಿಯ ನಬಾರ್ಡ್ ಸಹಾಯಕ ಮಹಾ ಪ್ರಬಂಧಕರಾದ ಹಿತಾ ಜಿ. ಸುವರ್ಣ ಅವರು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ವಿಮೆ, ಕೃಷಿ ಸಾಲ ಸೌಲಭ್ಯಗಳು, ರೈತ ಉತ್ಪಾದಕರ ಸಂಘಟನೆಗಳು ಹಾಗೂ ನಬಾರ್ಡನ ವಿವಿಧ ರೈತಪರ ಯೋಜನೆಗಳ ಕುರಿತು ಮಾಹಿತಿ ನೀಡಿದರು. ರೈತರು ಸರ್ಕಾರ ಹಾಗೂ ಬ್ಯಾಂಕುಗಳಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಆರ್ಥಿಕ ಸ್ಥಿರತೆ ಸಾಧಿಸಬೇಕೆಂದು ಸಲಹೆ ನೀಡಿದರು.ರೈತರು ಮಣ್ಣಿನ ಪರೀಕ್ಷೆ ಮಾಡಿಸಿ, ಸಮತೋಲಿತ ಪೋಷಕಾಂಶ ನಿರ್ವಹಣೆಯನ್ನು ಅಳವಡಿಸಿಕೊಂಡು, ಭತ್ತದ ನಂತರ ಉದ್ದು ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಸುವ ಮೂಲಕ ಮಣ್ಣಿನ ಆರೋಗ್ಯ ಸುಧಾರಣೆ ಹಾಗೂ ಆದಾಯ ಹೆಚ್ಚಳ ಸಾಧಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು, ನಬಾರ್ಡ್ ಅಧಿಕಾರಿಗಳು, ಪ್ರಗತಿಪರ ರೈತರು ಹಾಗೂ ಕೆಸ್ತೂರು ಗ್ರಾಮದ ರೈತರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.---
17ಸಿಎಚ್ಎನ್12
ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರೈತರ ಆದಾಯ ವೃದ್ಧಿ ಹಾಗೂ ಮಣ್ಣಿನ ಆರೋಗ್ಯ ಸಂರಕ್ಷಣೆಯ ಉದ್ದೇಶದಿಂದ ಭತ್ತದ ನಂತರ ಉದ್ದು ಬೆಳೆ ಪ್ರಾತ್ಯಕ್ಷಿಕೆ ಮತ್ತು ಸಮತೋಲಿತ ರಸಗೊಬ್ಬರ ಬಳಕೆಯ ಕುರಿತು ಕ್ಷೇತ್ರೋತ್ಸವ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.