ಏಳು ವರ್ಷಗಳ ನಂತರ ಜನಸ್ಪಂದನೆಗೆ ಇಂದು ಚಾಲನೆ

KannadaprabhaNewsNetwork |  
Published : Jun 26, 2024, 12:34 AM IST
೨೫ಕೆಎನ್‌ಕೆ-೧ಜನ ಸ್ಪಂಧನಾ ಕಾರ್ಯಕ್ರಮ ಹಿನ್ನಲೆಯಲ್ಲಿ ತಹಶೀಲ್ದಾರ ಹಾಗೂ ಅಧಿಕಾರಿಗಳು ಸಿದ್ಧತೆ ಪರಿಶೀಲಿಸಿದರು. ೨೫ಕೆಎನ್‌ಕೆ-೧. ಚಿರ್ಚಗುಡ್ಡ ತಾಂಡಾ ನಿಮಿವಾಸಿಗಳು ಹಕ್ಕು ಪತ್ರ ನೀಡುವಂತೆ ತಹಶೀಲ್ ಕಚೇರಿಗೆ ದೌಡಾಯಿಸಿ ಒತ್ತಾಯಿಸಿದರು.  | Kannada Prabha

ಸಾರಾಂಶ

೭ ವರ್ಷಗಳ ನಂತರ ಪಟ್ಟಣದಲ್ಲಿ ಜಿಲ್ಲಾಡಳಿತ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

೭ ವರ್ಷಗಳ ನಂತರ ಪಟ್ಟಣದಲ್ಲಿ ಜಿಲ್ಲಾಡಳಿತ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರ ವ್ಯಾಪ್ತಿಯ ನವಲಿಯ ರೈಸ್ ಟೆಕ್ನಾಲಜಿ ಪಾರ್ಕ್‌ನಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆದಿದ್ದು, ಬಿಟ್ಟರೇ ಉಳಿದೆಡೆ ಎಲ್ಲಿಯೂ ನಡೆದಿರಲಿಲ್ಲ. ಈಗ ಒಣಭೂಮಿ ಪ್ರದೇಶ ಹಾಗೂ ತಾಲೂಕು ಕೇಂದ್ರವಾದ ಕನಕಗಿರಿಯಲ್ಲಿ ಏಳು ವರ್ಷಗಳ ನಂತರ ಈ ಕಾರ್ಯಕ್ರಮ ನಡೆಯುತ್ತಿದೆ.

ತಾಲೂಕು ವ್ಯಾಪ್ತಿಯಲ್ಲಿ ಜಮೀನುಗಳ ಪೋಡಿಯಾಗದಿರುವುದು, ಸಾಗುವಳಿ ಚೀಟಿ ನೀಡದಿರುವುದು, ಸರ್ಕಾರಿ ಜಮೀನು ಒತ್ತುವರಿ, ಮುಜರಾಯಿ ಇಲಾಖೆಯ ಕನಕಾಚಲಪತಿ ದೇವಸ್ಥಾನ ಜಾಗೆ ಹದ್ದುಬಸ್ತು ವಿಳಂಬ, ಪಾವತಿಯಾಗದ ಶೌಚಾಲಯಗಳ ಬಿಲ್, ಜೆಜೆಎಂ ಕಾಮಗಾರಿ ಕಳಪೆ, ೧೦೮ ವಾಹನ ದುರಸ್ತಿ, ವೈದ್ಯರ ಹಾಗೂ ಹೆರಿಗೆ ತಜ್ಞರ ನೇಮಕ, ಬಸ್‌ಗಳ ಕೊರತೆ, ಮಾಸಾಶನ ಹೆಚ್ಚಳಕ್ಕೆ ತಾಂತ್ರಿಕ ಸಮಸ್ಯೆ ಸೇರಿ ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜೂ.೨೬ರಂದು ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರು ಸದುಪಯೋಗಪಡಿಸಿಕೊಳ್ಳುವಂತೆ ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.

ಈ ಹಿಂದೆ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿ ವಿಲೇವಾರಿಯಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಕೆಲ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದ್ದು, ಈ ಕಾರ್ಯಕ್ರಮದಲ್ಲಾದರೂ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಾ ಎಂಬುದನ್ನು ನೋಡಬೇಕಿದೆ.

ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ:

ಈ ಹಿಂದಿನ ಬೊಮ್ಮಾಯಿ ನೇತೃತ್ವದ ಸರ್ಕಾರ ತಾಲೂಕಿನ ಚಿರ್ಚನಗುಡ್ಡ ತಾಂಡಾದ ೧೮೨ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಉದ್ದೇಶಿಸಿತ್ತು. ಇದರಲ್ಲಿ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದ್ದು, ಉಳಿದವರಿಗೆ ಏಕೆ ಕೊಟ್ಟಿಲ್ಲ ಎಂದು ತಾಂಡಾ ನಿವಾಸಿಗಳು ಮಂಗಳವಾರ ತಹಸೀಲ್ ಕಚೇರಿಗೆ ದೌಡಾಯಿಸಿ ಪ್ರತಿಭಟನೆ ನಡೆಸಿ, ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.

ಇದಕ್ಕೆ ತಹಸೀಲ್ದಾರ ವಿಶ್ವನಾಥ ಮುರುಡಿ ಪ್ರತಿಕ್ರಿಯಿಸಿ, ಈ ಹಿಂದಿನ ಸರ್ಕಾರದಲ್ಲಿ ಹಕ್ಕುಪತ್ರ ಬಂದಿವೆ. ನಿಜವಾದ ಫಲಾನುಭವಿಗಳು ಯಾರು ಎಂಬುದನ್ನು ಪರಿಶೀಲಿಸಿ ಕೊಡಬೇಕಾಗುತ್ತದೆ. ಈಗಾಗಲೇ ಕೆಲ ಫಲಾನುಭವಿಗಳು ಕಚೇರಿಗೆ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆದಿದ್ದಾರೆ. ಬಾಕಿ ಉಳಿದ ಫಲಾನುಭವಿಗಳ ಹಕ್ಕುಪತ್ರವನ್ನು ತಾಪಂ ಇಒ ಅವರು ನೀಡಲಿದ್ದಾರೆ. ಜೂ.೨೬ರಂದು ಜನಸ್ಪಂದನಾ ಸಭೆ ಇದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ