ಪಕ್ಷಾಂತರದಿಂದ ರಂಗೇರಿದ ಅಫಜಲ್ಪುರ ರಾಜಕೀಯ

KannadaprabhaNewsNetwork | Published : Apr 27, 2024 1:00 AM

ಸಾರಾಂಶ

2019ರ ಲೋಕಸಭೆ ಚುನಾವಣೆಯಲ್ಲಿ ಅಫಜಲ್ಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಂ.ವೈ. ಪಾಟೀಲ್ ಶಾಸಕರಾಗಿದ್ದರೂ ಕೂಡ ಬಿಜೆಪಿಗೆ 37 ಸಾವಿರ ಲೀಡ್ ಸಿಕ್ಕಿತ್ತು. ಇದು ಇಡೀ ಕಲಬುರಗಿ ಲೋಕಸಭಾ ಮತಕ್ಷೇತ್ರದಲ್ಲೇ ಅತೀ ಹೆಚ್ಚಿನ ಲೀಡ್ ಎನಿಸಿತ್ತು.

ರಾಹುಲ್ ದೊಡ್ಮನಿ

ಕನ್ನಡಪ್ರಭ ವಾರ್ತೆ ಚವಡಾಪುರ

ಪಕ್ಷಾಂತರ ಪರ್ವದಿಂದಾಗಿ ಅಫಜಲ್ಪುರ ರಾಜಕೀಯ ರಂಗೇರಿದೆ. ಕಳೆದ ಚುನಾವಣೆಯಲ್ಲಿ ಖರ್ಗೆ ಸೋಲಿಗೆ ಇರವ ಪ್ರಮುಖ ಕಾರಣಗಳಲ್ಲಿ ಒಂದಾದ ಮಾಲೀಕಯ್ಯಾ ಗುತ್ತೇದಾರ್‌ ಕಾಂಗ್ರೆಸ್‌ಗೆ ಮರಳಿದ್ದಾರೆ. ನಾಲ್ಕು ಬಾರಿ ಕಾಂಗ್ರೆಸ್‍ನಿಂದ ಗೆದ್ದು ಮಂತ್ರಿಯಾಗಿದ್ದ ಮಾಲೀಕಯ್ಯ ಗುತ್ತೇದಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖರ್ಗೆ ಮೇಲಿನ ಮುನಿಸಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಚುನಾವಣೆ ಸ್ಪರ್ಧೆ ಮಾಡಿದ್ದರು.

ಬಿಜೆಪಿಯಲ್ಲಿ ಟಿಕೇಟ್ ಸಿಗದೇ ಇರುವುದರಿಂದ ಬೇಸತ್ತು ಖರ್ಗೆ ಕೈ ಬಲಪಡಿಸುತ್ತೇನೆಂದು ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಬಂದಿದ್ದ ಎಂ.ವೈ. ಪಾಟೀಲ್ ಅವರು ಚುನಾವಣೆಯಲ್ಲಿ ವಿಜೇತರಾಗಿದ್ದರು. ಅದಾದ ಬಳಿಕ ನಡೆದ ಲೋಕಸಮರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಹರಸಾಹಸ ಪಟ್ಟಿದ್ದ ಮಾಲೀಕಯ್ಯ ಗುತ್ತೇದಾರ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ತಮ್ಮ ಸ್ಥಾನಮಾನಕ್ಕೆ ಹಿನ್ನಡೆಯಾಗುತ್ತಿರುವುದು ಕಂಡು ಪುನಃ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ.

5 ದಶಕಗಳಿಂದ ರಾಜಕೀಯ ಬದ್ಧ ವೈರಿಗಳಾಗಿದ್ದ ಶಾಸಕ ಎಂ.ವೈ. ಪಾಟೀಲ್ ಮತ್ತು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು ಅಫಜಲ್ಪುರ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಆಗಿರುವ 37 ಸಾವಿರ ಕಾಂಗ್ರೆಸ್ ಪಕ್ಷದ ಹಿನ್ನಡೆಯನ್ನು ಹಿಮ್ಮೆಟ್ಟಿ ಹೆಚ್ಚು ಮತಗಳು ಬರುವಂತೆ ಮಾಡುತ್ತೇವೆಂದು ಅಖಾಡಕ್ಕಿಳಿದಿದ್ದಾರೆ.

50 ಸಾವಿರ ಲೀಡ್ ಕೊಡಿಸದಿದ್ದರೆ ರಾಜಕೀಯ ಸನ್ಯಾಸ ಎಂದಿದ್ದ ಪಾಟೀಲ್‍: 2019ರ ಲೋಕಸಭೆ ಚುನಾವಣೆಯಲ್ಲಿ ಅಫಜಲ್ಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಂ.ವೈ. ಪಾಟೀಲ್ ಶಾಸಕರಾಗಿದ್ದರೂ ಕೂಡ ಬಿಜೆಪಿಗೆ 37 ಸಾವಿರ ಲೀಡ್ ಸಿಕ್ಕಿತ್ತು. ಇದು ಇಡೀ ಕಲಬುರಗಿ ಲೋಕಸಭಾ ಮತಕ್ಷೇತ್ರದಲ್ಲೇ ಅತೀ ಹೆಚ್ಚಿನ ಲೀಡ್ ಎನಿಸಿತ್ತು. ಅಫಜಲ್ಪುರ ಮತಕ್ಷೇತ್ರದ ಮತ ಕೊರತೆಯಿಂದಲೇ ಸೋಲಿಲ್ಲದ ಸರದಾರ ಎನಿಸಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿ ಸೋಲಿನ ಕಹಿ ಅನುಭವಿಸುವಂತಾಗಿತ್ತು.

ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಎಂ.ವೈ. ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೇಟ್ ಲಭಿಸಿತ್ತು. ಎಂ.ವೈ ಪಾಟೀಲ್ ಪರವಾಗಿ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದ್ದಲ್ಲದೆ ಭಾವನಾತ್ಮಕವಾಗಿ ಮಾತನಾಡಿ ಮತದಾರರ ಮನಗೆದ್ದು ಎಂ.ವೈ ಪಾಟೀಲ್ ಅವರನ್ನು ಭಾರಿ ಬಹುಮತದಿಂದ ಗೆಲ್ಲುವಲ್ಲಿ ಪ್ರಮುಖ ಕಾರಣವಾಗಿದ್ದರು. ಎಂ.ವೈ ಪಾಟೀಲ್ ಅವರ ಗೆಲುವಿನ ಬಳಿಕ ತಮ್ಮ ಗೆಲುವಿಗೆ ಕಾರಣವಾಗಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಋಣ ತೀರಿಸುವ ಕುರಿತು ಅನೇಕ ಬಾರಿ ಮಾತನಾಡಿದ್ದಾರೆ. ಎಂ.ವೈ ಪಾಟೀಲ್ ಅವರ ಪುತ್ರ ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ ಪಾಟೀಲ್ ಕಾಂಗ್ರೆಸ್ ನ್ಯಾಯ ಯಾತ್ರೆ ಕಾರ್ಯಕ್ರಮದಲ್ಲಿ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 50 ಸಾವಿರ ಮತಗಳ ಲೀಡ್ ಕೊಡಿಸದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ವಾಗ್ದಾನ ಮಾಡಿದ್ದರು. ಈಗ ತಾವು ಮಾಡಿದ ವಾಗ್ದಾನ ಅನುಷ್ಠಾಗೊಳಿಸಬೇಕಿದೆ.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ಕೂಡ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಪಕ್ಷದ ವರೀಷ್ಠರಿಗೆ ಭರವಸೆ ನೀಡಿದ್ದಾರೆ. ರಾಜಕೀಯ ಬದ್ದವೈರಿಗಳಾಗಿದ್ದವರು ಒಂದಾಗಿ ಒಂದೇ ಪಕ್ಷದಲ್ಲಿರುವುದರಿಂದ ಅರುಣಕುಮಾರ ಪಾಟೀಲ್ ಅವರ 50 ಸಾವಿರ ಮತಗಳ ಲೀಡ್ ಭರವಸೆ ಈಡೆರುವುದೇ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಪಾಟೀಲ್ ಬೆಂಬಲಿಗರು, ಗುತ್ತೇದಾರ ಬೆಂಬಲಿಗರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಕಮಲ ಮುಡಿದ ನಿತೀನ್‍ ಮುಂದೆ ದೊಡ್ಡ ಟಾಸ್ಕ್: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 2ನೇ ಅತೀ ಹೆಚ್ಚು ಮತಗಳನ್ನು ಪಡೆದು ರಾಜ್ಯ ರಾಜಕಾರಣದಲ್ಲಿ ಪ್ರಭಾವ ಮೂಡಿಸಿರುವ ಯುವ ಮುಖಂಡ ನಿತೀನ್ ಗುತ್ತೇದಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಲ್ಲದೆ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಅಫಜಲ್ಪುರ ಮತಕ್ಷೇತ್ರದಲ್ಲಿ ಬಿಜೆಪಿಗೆ ಆಗಿದ್ದ 37 ಸಾವಿರ ಮತಗಳ ಲೀಡ್‍ಅನ್ನು ಬ್ರೇಕ್ ಮಾಡಿ ಇನ್ನೂ ಹೆಚ್ಚಿನ ಲೀಡ್ ಕೊಡಿಸುವ ಟಾಸ್ಕ್ ಹೊತ್ತು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಸ್ವಂತ ಹಿರಿಯ ಸಹೋದರನ ವಿರುದ್ದವೇ ರಾಜಕೀಯ ಉರಿಬಾಣಗಳನ್ನು ಬಿಡುವ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ.

Share this article