ಕನ್ನಡಪ್ರಭ ವಾರ್ತೆ ಅಥಣಿ
ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಉತ್ತರ ಕರ್ನಾಟಕ ಭಾಗದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.ಪಟ್ಟಣದಲ್ಲಿ ಗುರುವಾರ ನಡೆದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲಿದ್ದು, ಆ ಅದೃಷ್ಟ ನನಗೂ ಏಕೆ ಕೂಡಿ ಬರಬಾರದು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಲಿಂಗಾಯತ ಬಂಧುಗಳಿಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುವೆ ಎಂದು ಭರವಸೆ ನೀಡಿದರು.ಕಾಂಗ್ರೆಸ್‌ನವರು ಪ್ರತಿ ಚುನಾವಣೆಯಲ್ಲಿ ಜಾಜಿ ವಿಷ ಬೀಜ ಬಿತ್ತಿ ಲಾಭ ಮಾಡಿಕೊಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಒಂದೇ ಧರ್ಮದ ಪರವಾದ ಅನೇಕ ಅಂಶಗಳಿವೆ ಎಂದು ದೂರಿದರು.
ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಜಮ್ಮು ಕಾಶ್ಮೀರಕ್ಕೆ ನೆಹರು 370ನೇ ವಿಧಿ ಜಾರಿಗೆ ತಂದರು. ಆಗ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿಸಿದ್ದರು. ಆದರೂ ನೆಹರು ಈ ವಿಧಿ ಜಾರಿಗೊಳಿಸಿದರು. ಇದನ್ನು ಪಂ.ಶ್ಯಾಮಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು. ಈಗ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದರು. ಇಂತಹ ಪ್ರಧಾನಿಯನ್ನು ನಾವು ಪುನರಾಯ್ಕೆ ಮಾಡಿ ಭಾರತ ಮತ್ತು ಸನಾತನ ಧರ್ಮವನ್ನು ಉಳಿಸಬೇಕಿದೆ ಎಂದು ತಿಳಿಸಿದರು.ಚಿಕ್ಕೋಡಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಿರುವೆ. ಪಿಎಂಜಿಎಸ್‌ವೈ ಯೋಜನೆಯಡಿ ₹25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿರುವೆ. ಅಥಣಿ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ₹4,480 ಕೋಟಿ ಅನುದಾನ ಮಂಜೂರು ಮಾಡಿಸಿರುವೆ. ನನ್ನ ಧರ್ಮ ಪತ್ನಿ ಶಶಿಕಲಾ ಜೊಲ್ಲೆ ರಾಜ್ಯ ಸರ್ಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ವೇಳೆ ಅಥಣಿ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು. ಡಾ.ರವಿ ಸಂಕ ಸ್ವಾಗತಿಸಿದರು. ಶಿವ ಪ್ರಸನ್ನ ಹಿರೇಮಠ ನಿರೂಪಿಸಿದರು. ಈ ವೇಳೆ ಮುಖಂಡರಾದ ಉಮೇಶರಾವ ಬಂಟೋಡಕರ, ಪ್ರಭಾಕರ ಚವ್ಹಾಣ, ಅಪ್ಪಾಸಾಹೇಬ್ ಅವತಾಡೆ, ಸತ್ಯಪ್ಪಾ ಬಾಗೆನ್ನವರ, ಗಿರೀಶ ಬುಟಾಳಿ, ಧರೆಪ್ಪ ಠಕ್ಕಣ್ಣವರ, ರವಿ ಪೂಜಾರಿ, ದಿಲೀಪ ಕಾಂಬಳೆ, ಅಣ್ಣಾಸಾಹೇಬ್ ನಾಯಿಕ, ಸದಾಶಿವ ಕೊಂಪಿ ಇದ್ದರು.ಎಲ್ಲ ಕ್ಷೇತ್ರಗಳನ್ನೂ ಜಾರಕಿಹೊಳಿ ಕುಟುಂಬಕ್ಕೆ ಮೀಸಲಿಟ್ಟರೇ ಹಾಲುಮತ, ಲಿಂಗಾಯತ ಸೇರಿದಂತೆ ಇನ್ನುಳಿದ ಸಮಾಜ ಬಾಂಧವರ ನಾಯಕರು ಏನು ಮಾಡಬೇಕು?. ಜಾರಕಿಹೊಳಿ ಕುಟುಂಬದವರನ್ನೇ ಅಭ್ಯರ್ಥಿ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಧುರೀಣರಿಗೂ ಬೇಸರವಾಗಿದೆ. ಇದರಿಂದ ಬಹುಪಾಲು ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೆ.-ಬಸನಗೌಡ ಪಾಟೀಲ ಯತ್ನಾಳ,
ವಿಜಯಪುರ ನಗರ ಶಾಸಕರು.-----ಜಾತಿಯ ವಿಷಬೀಜ ಬಿತ್ತುವ ಮೂಲಕ ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಇದಕ್ಕೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು. ಕಳೆದ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ನನಗೆ 1.11ಲಕ್ಷ ಮತಗಳನ್ನು ಕೊಟ್ಟಿರುವಂತೆ ಈ ಚುನಾವಣೆಯಲ್ಲಿಯೂ ನೀಡಿ, ಪ್ರಧಾನಿ ಮೋದಿಯವರ ಕೈ ಬಲ ಪಡಿಸಬೇಕು.
-ಅಣ್ಣಾಸಾಹೇಬ್ ಜೊಲ್ಲೆ, ಚಿಕ್ಕೋಡಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ.---------
ದೇಶ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಇರುವವರೆಗೂ ನಾವು ಸುರಕ್ಷಿತರಾಗಿರುತ್ತೇವೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದಾರೆ.-ಮಹೇಶ ಕುಮಠಳ್ಳಿ,
ಮಾಜಿ ಶಾಸಕರು.