ಲೆಬನಾನ್ ಪೇಜರ್ ಬ್ಲಾಸ್ಟ್ ಬೆನ್ನಲ್ಲೇ ಭಾರತಕ್ಕೂ ಆನ್‌ಲೈನ್‌ ಯುದ್ಧಾತಂಕ?

KannadaprabhaNewsNetwork |  
Published : Sep 19, 2024, 01:50 AM IST
ಮಂಗಳೂರಿನ ಸೈಬರ್‌ ತಜ್ಞ ಡಾ.ಅನಂತ ಪ್ರಭು | Kannada Prabha

ಸಾರಾಂಶ

ಭಾರತಕ್ಕೆ ವಿದೇಶದಿಂದ ರಫ್ತಾಗುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳ ವಿಶೇಷ ಸ್ಕ್ಯಾನಿಂಗ್ ನಡೆಸುವಂತೆ ಡಾ.ಅನಂತ ಪ್ರಭು ಅವರು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಲೆಬನಾನ್‌, ಸಿರಿಯಾ ದೇಶಗಳಲ್ಲಿ ಉಗ್ರರ ಪೇಜರ್‌ ಸ್ಫೋಟ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಇಂತಹ ಆನ್‌ಲೈನ್‌ ಯುದ್ಧಗಳು ಶತ್ರು ರಾಷ್ಟ್ರಗಳಿಂದ ಭಾರತದ ವಿರುದ್ಧವೂ ಆಗುವ ಅಪಾಯದ ಬಗ್ಗೆ ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

ವಿದೇಶದಿಂದ ರಫ್ತಾಗುವ ಎಲೆಕ್ಟ್ರಾನಿಕ್ ವಸ್ತುಗಳೇ ಭಾರತಕ್ಕೆ ಡೇಂಜರ್ ಆಗುವ ಸಂಭವ ಇದೆ. ವಿದೇಶಿ ಎಲೆಕ್ಟ್ರಾನಿಕ್ ವಸ್ತುಗಳ ಅಪಾಯದ ಬಗ್ಗೆ ಮಂಗಳೂರಿನ ಖ್ಯಾತ ಸೈಬರ್ ತಜ್ಞ ಡಾ‌.ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ವಿದೇಶದಿಂದ ರಫ್ತಾಗುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳ ವಿಶೇಷ ಸ್ಕ್ಯಾನಿಂಗ್ ನಡೆಸುವಂತೆ ಡಾ.ಅನಂತ ಪ್ರಭು ಅವರು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಕುರಿತು ಬುಧವಾರ ಮಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜ್ಬುಲ್ ಸಂಘಟನೆ ಫೆಬ್ರವರಿಯಿಂದಲೂ ಮೊಬೈಲ್ ಫೋನ್‌ ಬಳಕೆ ಮಾಡುವುದನ್ನು ನಿಷೇಧಿಸಿತ್ತು. ಬದಲಾಗಿ ಅಲ್ಲಿ ಪೇಜರ್‌ಗಳನ್ನು ಸಂವಹನಕ್ಕಾಗಿ ಬಳಸುತ್ತಿತ್ತು. ಗೋಲ್ಡ್‌ ಅಪೋಲೋ, ತೈವಾನ್ ಆಧಾರಿತ ಕಂಪನಿ ವಿಶ್ವದ ಪ್ರಮುಖ ಪೇಜರ್ ತಯಾರಕರಲ್ಲೊಂದು. ಲೀಥಿಯಂ-ಅಯಾನ್ ಬ್ಯಾಟರಿಗಳೊಂದಿಗೆ ಕೆಲಸ ಮಾಡುತ್ತಿದ್ದ ಈ ಪೇಜರ್‌ಗಳನ್ನೇ ಸ್ಫೋಟಕ್ಕೆ ಬಳಸಲಾಗಿದೆ. ಚಿಪ್ ಮೂಲಕ ಅಳವಡಿಸಲಾದ ಸ್ಫೋಟಕ Kiska 3 ಅನ್ನು ಒಳಗೊಂಡ ಬ್ಯಾಟರಿಗಳನ್ನು ತಯಾರಿಸಿ ಬಳಸಲಾಗಿದೆ. ಇದೇ ರೀತಿಯ ದಾಳಿಯ ಆತಂಕ ಭಾರತ ದೇಶಕ್ಕೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾ ಸೇರಿ ಬೇರೆ ರಾಷ್ಟ್ರಗಳಿಂದ ಭಾರತಕ್ಕೂ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಆಗುತ್ತಿದೆ. ಭಾರತಕ್ಕೂ ಇದೇ ರೀತಿ ಶತ್ರುಗಳು ಆನ್‌ಲೈನ್ ದಾಳಿ ನಡೆಸುವ ಸಾಧ್ಯತೆ ಇದ್ದು, ಹಾಗಾಗಿ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳ ಸೆಕ್ಯೂರಿಟಿ ಚೆಕ್ ಹೆಚ್ಚಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಭಾರತಕ್ಕೆ ಆಮದು ಮಾಡುವ ಪ್ರತಿ ಉತ್ಪನ್ನವನ್ನು ತಪಾಸಣೆ ಮಾಡುವ ಸಮಿತಿ ರಚಿಸಬೇಕು. ಇಲ್ಲದಿದ್ದರೆ ಈ ದಾಳಿಗಳನ್ನು ಇನ್ನೂ ಹೆಚ್ಚು ಮಾರಕವಾಗುವ ರೀತಿಯಲ್ಲಿ ಮಾಡಬಹುದಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು