ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೇ ಸಚಿವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಭಾವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಹಾವೇರಿ: ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೇ ಸಚಿವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಭಾವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಭಾಗ ಆಗಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ. ಕಾಂಗ್ರೆಸ್‌ನಲ್ಲಿ ಮಂತ್ರಿಗಳ ಕುಟುಂಬಸ್ಥರಿಗೆ ಟಿಕೆಟ್ ನೀಡಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಮೊದಲಿನಿಂದಲೂ ಬಂದಿದೆ. ಅದರಲ್ಲೇನು ಆಶ್ಚರ್ಯ ಇಲ್ಲ. ಆದರೆ, ಈ ಬಾರಿ ಇಷ್ಟು ಪ್ರಮಾಣದಲ್ಲಿ ಕುಟುಂಬ ರಾಜಕೀಯ ನಡೆಯಲು ಕಾರಣ ಬೇರೆನೇ ಇದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ನವರು ಸುಮಾರು ಹತ್ತು ಹನ್ನೆರಡು ಜನ ಮಂತ್ರಿಗಳಿಗೆ ಹೇಳಿದ್ದರು. ಆದರೆ, ಅವರಿಗೆ ಆರಿಸಿ ಬರುವ ವಿಶ್ವಾಸ ಇರಲಿಲ್ಲ, ಹಾಗಾದರೆ ನೀವೇ ಅಭ್ಯರ್ಥಿಯನ್ನು ಕೊಡಿ ಅಂದಾಗ ಅನಿವಾರ್ಯವಾಗಿ ಅವರು ಅವರ ಮಕ್ಕಳು, ಅಣ್ಣ-ತಮ್ಮಂದಿರಿಗೆ ಟಿಕೆಟ್ ಕೊಡಿಸಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಲು ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಭಾನುವಾರ ತೀರ್ಮಾನ: ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ದಿನಾಂಕವನ್ನು ಭಾನುವಾರ ತೀರ್ಮಾನ ಮಾಡುತ್ತೇವೆ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಎರಡು ಸಲ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಒಂದು ಸಲ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಒಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.ನಾನೂ ಸ್ಟಾರ್ ಪ್ರಚಾರಕನಾಗಿದ್ದೇನೆ. ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಎರಡನೇ ಹಂತದಲ್ಲೂ ಪ್ರಚಾರ ಮಾಡುತ್ತೇನೆ ಎಂದರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದು, ಚುನಾವಣೆ ಗಿಮಿಕ್ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶ್ರೀರಂಗಪಟ್ಟಣದ ಶಾಸಕರೇನು ಡಾಕ್ಟರ್ ಅಲ್ಲ. ಆರೋಗ್ಯದ ವಿಚಾರಗಳನ್ನು ರಾಜಕಾರಣಕ್ಕೆ ಎಳೆದು ತರುವುದು ಸಮಂಜಸ ಅಲ್ಲ. ಅವರು ಚೆನ್ನೈಗೆ ಹೋಗಿದ್ದು, ಚಿಕಿತ್ಸೆ ಪಡೆದಿದ್ದಕ್ಕೆ ಎಲ್ಲಾ ಸಾಕ್ಷಿಗಳಿವೆ. ರಾಜಕಾರಣದಲ್ಲಿ ರಾಜಕೀಯ ನೆಲೆಗಟ್ಟಿನಲ್ಲಿ ಹೋರಾಟ ಮಾಡಬೇಕು. ಶ್ರೀರಂಗಪಟ್ಟಣದ ಶಾಸಕರು ಕುಮಾರಸ್ವಾಮಿ ಜೊತೆ ನಿಕಟ ಸಂಬಂಧ ಹೊಂದಿದ್ದವರು. ಆದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ವೈಯಕ್ತಿಕ ವಿಚಾರ ತರಬಾರದು ಎಂದು ಹೇಳಿದರು.ಕುಮಾರಸ್ವಾಮಿಯವರು ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅವರು ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಎಲ್ಲವೂ ಸರಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.