ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದೊಂದು ವಾರದಿಂದ ಕಲಬುರಗಿಯನ್ನು ಕಾಡುತ್ತಿರುವ ಉರಿ ಬಿಸಿಲಿನ ತಾಪ, ಉಷ್ಣ ಅಲೆ ಶನಿವಾರವೂ ಇತ್ತಾದರೂ ಇದನ್ನೆಲ್ಲ ಲೆಕ್ಕಿಸದೆ ಶರಣರ ದಾಸೋಹ ಅಂಗಳದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಸಂಜೆ ಬರೋಬ್ಬರಿ 6 ಗಂಟೆಗೆ ಸೂರ್ಯದೇವ ಇನ್ನೇನು ತನ್ನ ಪಡುವಣದ ಪಯಣ ಮುಂದುವರಿಸುತ್ತಿದ್ದಂತೆಯೇ ಶಂಖನಾದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು.
ನಿಗದಿತ ಸಮಯಕ್ಕೆ ಶರಣಬಸವೇಶ್ವರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ದೇಗುಲದ ಆವರಣದಲ್ಲಿ ಎಳೆಯಲಾಯಿತು. ರಥೋತ್ಸವದ ನಿಮಿತ್ಯ ಖಾರಿಕ್, ಉತ್ತತ್ತಿ, ಬಾಳೆಹಣ್ಣಿನ ಕಟ್ಟುಗಳನ್ನು ರಥಕ್ಕೆ ಎಸೆಯುತ್ತ, ಶರಣರನ್ನು ಸ್ಮರಿಸುತ್ತ ಸೇರಿದ್ದ ಸಾವಿರಾರು ಭಕ್ತರು ನಮನ ಸಲ್ಲಿಸಿ ಪುನೀತರಾದರು.ಶರಣಬಸವೇಶ್ವರ ಮಹಾರಾಜ್ ಕೀ ಜೈ... ಎಂಬ ಲಕ್ಷಾಂತರ ಕಂಠಗಳ ಜಯಘೋಷ ಮೊಳಗುತ್ತಿದ್ದಂತಯೇ ಎತ್ತರದ ಪೀಠದ ಮೇಲೆ ಶರಣರು ಬಳಸುತ್ತಿದ್ದ ಪ್ರಸಾದ ಬಟ್ಟಲು, ಲಿಂಗ ಸಜ್ಜಿಕೆಗಳನ್ನು ಸೇರಿದ್ದ ಭಕ್ತರಿಗೆ ಪ್ರದರ್ಶಿಸಿವ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅವರು ಶಂಖನಾದ ಮಾಡಿದರು. 8 ನೇ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಸೇರಿದಂತೆ ದಾಸೋಹ ಮನೆಯತನದ ಪರಿವಾರದ ಸದಸ್ಯರೆಲ್ಲರೂ ಹಾಜರಿದ್ದು ಶರಣರನ್ನು ಮನದಲ್ಲೇ ನಮಿಸಿ ಪುಲಕಿತರಾದರು.
ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಅವರ ಪುತ್ರ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ರಥೋತ್ಸವದ ಮೊದಲು ಹಾಗೂ ನಂತರದ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರು ಅಲಂಕರಿಸಿದ ರಥಕ್ಕೆ ಪ್ರದಕ್ಷಿಣೆ ಹಾಕಿ ರಥಕ್ಕೆ ಪೂಜೆ ಸಲ್ಲಿಸಿ ವಿಶೇಷವಾದ ನೇವೈದ್ಯ ಸಮರ್ಪಿಸಿದರು.
ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ತೆಗೆದುಕೊಂಡ ಬೆಳ್ಳಿಯ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸಿದ್ದ ಬೆಳ್ಳಿಯ ಪೆಟ್ಟಿಗೆಯಲ್ಲಿ ಇರಿಸಲಾದ ಪವಿತ್ರಲಿಂಗದ ವಿಗ್ರಹ) ದೇಗುಲದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರದರ್ಶಿಸಿದಾಗ ಭಕ್ತರೆಲ್ಲರು ಇದನ್ನು ಕಣ್ತುಂಬಿಕೊಂಡರು.
ಶರಣಬಸವೇಶ್ವರರು ನಿಸ್ವಾರ್ಥ ಸೇವೆಗೆ ಮಾದರಿಯಾದವರು ಮತ್ತು ತಮ್ಮ ಜೀವಿತಾವಧಿಯಲ್ಲಿ ತಮ್ಮ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದವರು. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ತಮ್ಮ ಗ್ರಾಮಗಳಿಂದ ಮೈಲುಗಟ್ಟಲೆ ನಡೆದುಕೊಂಡು ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
ರಥೋತ್ಸವದವರೆಗೂ ಕಲಬುರಗಿ ನಗರದಲ್ಲಿ ಶರಣರ ಭಕ್ತರು ಉಪವಾಸವಿರುತ್ತಾರೆ, ನಂತರವಷ್ಟೇ ಪ್ರಸಾದ ಸೇವಿಸುವುದೂ ಕೂಡಾ ಇಲ್ಲಿನ ಪವಿತ್ರ ಆಚರಣೆಯಾಗಿದೆ. ಉಚ್ಛ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಅಪ್ಪಾಜಿಯವರ ಎಲ್ಲಾ ಕುಟುಂಬ ಸದಸ್ಯರು, ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಇತರ ಪ್ರಮುಖರು ಶರಣಬಸವೇಶ್ವರರ 202ನೇ ರಥೋತ್ಸವಕ್ಕೆ ಸಾಕ್ಷಿಯಾದರು.