ಕನ್ನಡಪ್ರಭ ವಾರ್ತೆ ಮೈಸೂರು ''''ಅವರು ಹೋದ ಮೇಲೆ'''' ಕೃತಿಯು ಸಾಧಕರ ಫ್ಲ್ಯಾಷ್ ಬ್ಯಾಕ್ ಚಿತ್ರಣಗಳಾಗಿವೆ.ಈಗ ನಮ್ಮ ನಡುವೆ ಇಲ್ಲದ ಸಾಹಿತ್ಯ, ಸಿನಿಮಾ, ರಾಜಕೀಯ ಕ್ಷೇತ್ರಗಳ ಸಾಧಕರ ಸಂಕ್ಷಿಪ್ತ ಬದುಕನ್ನು ಇಲ್ಲಿ ಕಟ್ಟಿಕೊಡುವುದರ ಜೊತೆಗೆ ಗತಿಸಿದ ನಂತರ ಅವರ ಬಂಧುಗಳ ಮನದಾಳದಲ್ಲಿ ಯಾವ ರೀತಿಯ ಅನುಭೂತಿ ಉಳಿದಿದೆ ಎಂಬುದನ್ನು ಲೇಖಕರಾದ ಎಸ್. ಪ್ರಕಾಶ್ ಬಾಬು ಅವರು ವಿಭಿನ್ನ, ವಿಶಿಷ್ಟವಾಗಿ ನಿರೂಪಿಸಿದ್ದಾರೆ.ಇದೊಂದು ರೀತಿಯಲ್ಲಿ ಸಿನಿಮಾಗಳಲ್ಲಿ ಫ್ಲ್ಯಾಷ್ ಬ್ಯಾಕ್ ಕಥೆ ಹೇಳುವ ಮಾದರಿಯಲ್ಲಿದೆ. ಏಕೆಂದರೆ ಸಾಧಕರು ಗತಿಸಿದ ನಂತರ ಪತ್ನಿ, ಪುತ್ರ, ಪುತ್ರಿ, ಮೊಮ್ಮಗ- ಹೀಗೆ ಸಂಬಂಧಿಕರಲ್ಲಿ ಒಬ್ಬರನ್ನು ಭೇಟಿ ಮಾಡಿ, ಅವರ ಮೂಲಕವೇ ಸಾಧಕರ ಕಥೆ ಹೇಳಿಸಿದ್ದಾರೆ. ಆ ಮೂಲಕವೇ ಅವರ ಇಡೀ ವ್ಯಕ್ತಿತ್ವ, ಬದುಕನ್ನು ಅನಾವರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಲೇಖಕರು ಇಲ್ಲಿ ನಿರೂಪಕರಾಗಿದ್ದಾರೆ. ಆದರೂ ಸಂದರ್ಶಕರಿಗೆ ಪೂರಕವಾದ ಮಾತುಗಳನ್ನು ವಿಶಿಷ್ಟ ಶೈಲಿಯಲ್ಲಿ ಬರೆಯುವ ಮೂಲಕ ಕೃತಿಯ ಅಂದವನ್ನು ಹೆಚ್ಚಿಸಿದ್ದಾರೆ. ಇದರಿಂದ ಈ ವಿಭಿನ್ನ ಪ್ರಯೋಗ ಗಮನ ಸೆಳೆಯುವುದರ ಜೊತೆಗೆ ಕುತೂಹಲ ಕೆರಳಿಸಿ, ಓದಿಸಿಕೊಂಡು ಹೋಗುತ್ತದೆ.ತರಾಸು, ಎಂ.ಪಿ. ಶಂಕರ್, ತೂಗುದೀಪ ಶ್ರೀನಿವಾಸ್, ಲೋಕೇಶ್, ಮೈಸೂರು ಲೋಕೇಶ್, ಎಚ್. ನಾಗಪ್ಪ, ಸುಂದರಕೃಷ್ಣ ಅರಸ್, ಕುವೆಂಪು, ತ.ಸು. ಶಾಮರಾವ್, ಚದುರಂಗ, ಮ. ಶ್ರೀಧರಮೂರ್ತಿ, ಬಿ. ರಾಚಯ್ಯ, ವಿಜಯನಾರಸಿಂಹ, ಅಬ್ದುಲ್ ನಜೀರ್ ಸಾಬ್, ಕೆ. ಹಿರಣ್ಣಯ್ಯ, ಕೆ.ಎಸ್. ಅಶ್ವತ್ಥ್, ಡಿ. ದೇವರಾಜ ಅರಸು,ಶಂಕರ್ ಸಿಂಗ್, ಅಶ್ವತ್ಥ್ ನಾರಾಯಣ ಶಾಸ್ತ್ರಿ, ಅನಕೃ, ಎಚ್.ಡಿ. ತುಳಸಿದಾಸಪ್ಪ, ಸುಧೀರ್, ಪಿಟೀಲು ಚೌಡಯ್ಯ, ಟಿ.ಎನ್. ಬಾಲಕೃಷ್ಣ, ನರಸಿಂಹರಾಜು, ಉಡುಪಿ ಜಯರಾಂ, ಶಂಕರನಾಗ್, ಉದಯಕುಮಾರ್, ಪೂರ್ಣಚಂದ್ರ ತೇಜಸ್ವಿ, ಆರ್. ಗುಂಡೂರಾವ್, ಕೆ.ಎಚ್. ಪಾಟೀಲ್, ಮುಸುರಿ ಕೃಷ್ಣಮೂರ್ತಿ, ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಶ್ರೀರಂಗಮೂರ್ತಿ ಅವರ ಬದುಕು, ಸಾಧನೆ- ಸಿದ್ಧಿ ಇಲ್ಲಿ ದಾಖಲಾಗಿದೆ. ''''ಮಂಗಳ'''' ವಾರಪತ್ರಿಕೆಯಲ್ಲಿ 2010ರ ಏಪ್ರಿಲ್ನಿಂದ 2012 ರ ಜನವರಿ ನಡುವೆ ಪ್ರಕಟವಾದ ''''ಅವರು ಹೋದ ಮೇಲೆ'''' ಅಂಕಣದ ಬರಹಗಳಿವು. ಆಸಕ್ತರು ಸಿವಿಜಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದ್ದು, ಆಸಕ್ತರು ಎಸ್. ಪ್ರಕಾಶ್ ಬಾಬು, ಮೊ. 98444 63930 ಸಂಪರ್ಕಿಸಬಹುದು.