ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಳೆದ 40 ವರ್ಷಗಳಿಂದ ಕನ್ನಡ ಭವನ ನಿರ್ಮಾಣ ಮಾಡದೆ ಕಡೆಗಣಿಸಿದ್ದು ಈ ಬಾರಿ ಭವನ ನಿರ್ಮಾಣಕ್ಕೆ ಹೊಸ ಸಮಿತಿ ರಚಿಸಿ ಅದರ ಮೂಲಕ ಕನ್ನಡ ಭವನ ನಿರ್ಮಾಣ ಮಾಡಿಯೇ ತೀರಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
40 ವರ್ಷವಾದರೂ ಭವನ ಕಟ್ಟಿಲ್ಲಪಟ್ಟಣದಲ್ಲಿ ಕನ್ನಡಭವನ ಕಟ್ಟಲು ಪುರಸಭೆಯಿಂದ ನಿವೇಶನ ನೀಡಲಾಗಿದೆ, ಆದರೆ 40 ವರ್ಷಗಳು ಕಳೆದರೂ ಇದುವರೆಗೂ ಭವನ ಮಾತ್ರ ನಿರ್ಮಾಣವಾಗಲೇ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ,ಶಾಸಕರ ಸಮ್ಮುಖದಲ್ಲೆ ಕನ್ನಡಭವನ ಕಟ್ಟಬೇಕೆಂದು ಸಭೆಯಲ್ಲಿದ್ದವರು ಒತ್ತಾಯಿಸಿದ್ದರಿಂದ ಭವನ ನಿರ್ಮಾಣ ಸಮಿತಿ ರಚಿಸಿ ಅದರ ಮೂಲಕ ಕಟ್ಟಲಾಗುವುದು ಎಂದು ತಿಳಿಸಿದರು. ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ಪುರಸಭೆ ಕಚೇರಿಯ ಆವರಣದಲ್ಲಿ ಕಾರ್ಯಕ್ರಮವನ್ನು 9.30ಕ್ಕೆ ಧ್ವಜಾರೋಹಣ ನೆರವೇರಿಸಿ ಹಾಗೂ ವೇದಿಕೆ ಕಾರ್ಯಕ್ರಮವನ್ನು ನೆರವೇರಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ತಬ್ದಚಿತ್ರಗಳ ಮೆರವಣಿಗೆ ಮಾಡಲಾಗುವುದು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಹಾಗೂ ಖಾಸಗಿ ಶಾಲೆಗಳಿಂದ ಕಡ್ಡಾಯವಾಗಿ ಪಲ್ಲಕ್ಕಿಗಳು ಭಾಗವಹಿಸಬೇಕು. ಈ ಸಂದರ್ಭದಲ್ಲಿ ಗೈರು ಆದವರ ಮೇಲೆ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.ವಾಲ್ಮೀಕಿ ಭವನ ಬಳಸುತ್ತಿಲ್ಲ
ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಿಸಬೇಕೆಂದು ಹೋರಾಟ ಮಾಡಿದ ಪರಿಣಾಮ ಭವನ ನಿರ್ಮಾಣ ಮಾಡಿ ವರ್ಷವಾಗಿದೆ. ಆದರೆ ಇದುವೆರಗೂ ಸಮುದಾದವರು ಭವನವನ್ನು ಬಳಸಿಕೊಂಡಿಲ್ಲ. ಇದರಿಂದಾಗಿ ಭವನ ಧೂಳಿನಿಂದ ಆವರಿಸಿದೆ ಎಂದು ಸಮುದಾಯದ ಮುಖಂಡರ ಕಾರ್ಯವೈಖರಿಯನ್ನು ಟೀಕಿಸಿದರು. ಇಷ್ಟಕ್ಕೆ ಭವನ ಬೇಕಿತ್ತ ಎಂದು ಪ್ರಶ್ನಿಸಿದರು.ಸಮಾಜದ ಮುಖಮಡರುಒಪ್ಪಿದರೆ ಭವನವನ್ನು ಪುರಸಭೆ ವಶಕ್ಕೆ ಪಡೆದು ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಬಾರಿಯೂ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ತಾಲೂಕು ಆಡಳಿತ ಸಿದ್ದವಾಗಿದೆ. ಆದರೆ ಸಮಾಜ ಮುಖಂಡರಲ್ಲಿನ ಗುಂಪುಗಾರಿಕೆಯಿಂದ ಯಾರೂ ಭಾಗವಹಿಸದೆ ಕಡೆಗಣಿಸಲಾಗುತ್ತಿದೆ, ಈ ಬಾರಿ ಗುಂಪುಗಾರಿಕೆಯಿಲ್ಲದೆ ಎಲ್ಲರೂ ಒಂದಾಗಿ ಆಚರಿಸಲು ಮುಂದಾಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಎಸ್ ವೆಂಕಟೇಶ್,ತಹಶೀಲ್ದಾರ್ ವೆಂಕಟೇಶಪ್ಪ, ತಾಪಂ ಇಒ ರವಿಕುಮಾರ್, ಬಿಇಓ ಗುರುಮೂರ್ತಿ, ಪುರಸಭೆಯ ಮುಖ್ಯ ಅಧಿಕಾರಿ ಸತ್ಯನಾರಾಯಣ, ಇನ್ಸ್ಪೆಕ್ಟರ್ ನಂಜಪ್ಪ,ಸಮಾಜ ಕಲ್ಯಾಣಾಧಿಕಾರಿ ಅಂಜಲಿ,ರಂಗರಾಮಯ್ಯ,ರಾಂಪ್ರಸಾದ್,ಇತರರು ಇದ್ದರು.