ಶಿರಾದಲ್ಲಿ ಜಾತಿಗಣತಿ ವರದಿ ಮರು ಪರಿಶೀಲನೆಗೆ ನಂಜಾವಧೂತ ಶ್ರೀ ಆಗ್ರಹ

KannadaprabhaNewsNetwork | Published : Oct 9, 2024 1:43 AM

ಸಾರಾಂಶ

ರಾಜ್ಯ ಸರಕಾರ ಜಾತಿ ಜನಗಣತಿ ಅನುಷ್ಠಾನಗೊಳಿಸುವ ಮುನ್ನ ಅದನ್ನು ಮರು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಶಿರಾದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯ ಸರಕಾರ ಜಾತಿ ಜನಗಣತಿ ಅನುಷ್ಠಾನಗೊಳಿಸುವ ಮುನ್ನ ಅದನ್ನು ಮರು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದು ಈಗಾಗಲೇ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಗುದ್ದಾಟದಲ್ಲಿ ಸ್ವಾಮೀಜಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಮಂಗಳವಾರ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ನಡೆದ ಧರ್ಮ ಧ್ವಜ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯತ ಸೇರಿದಂತೆ ನೂರಾರು ಸಣ್ಣ ಸಣ್ಣ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿ ಜನಗಣತಿ ಮತ್ತೊಮ್ಮೆ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರಕಾರ ಮತ್ತೊಮ್ಮೆ ಜಾತಿ ಜನಗಣತಿ ಮಾಡಿಸಿ ಹಲವಾರು ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಂತಹ ಕೆಲಸ ಮಾಡಬೇಕು. ಒಕ್ಕಲಿಗ, ವೀರಶೈವ, ಆರ್ಯವೈಶ್ಯ ಸೇರಿದಂತೆ ಪ್ರತಿಷ್ಠಿತ ಸಮುದಾಯಗಳಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಇಂತಹ ಬಡ ಕುಟುಂಬಗಳ ಪ್ರಗತಿಗೆ ಜಾತಿ ಜನಗಣತಿ ಕೈಗನ್ನಡಿಯಾಗಬೇಕು. ಸರ್ವರಿಗೂ ಸಮ ಬಾಳು-ಸಹಪಾಲು ಎಂಬ ಭಾವನೆಯೊಂದಿಗೆ ವಸ್ತುನಿಷ್ಠ ವರದಿಯನ್ನು ಪಡೆಯುವ ಉದ್ದೇಶದಿಂದ ಪ್ರತಿ ಮನೆಮನೆಗೂ ತೆರಳಿ ಜಾತಿ ಜನಗಣತಿ ಮತ್ತೊಮ್ಮೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನದ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆತುರದ ನಿರ್ಧಾರ ಮಾಡಿ ಜಾತಿ ಜನಗಣತಿ ಅನುಷ್ಠಾನ ಮಾಡಬಾರದು, ಮತ್ತೊಮ್ಮೆ ಪರಿಶೀಲನೆ ಮಾಡಿ ಎಂದು ಶ್ರೀಗಳು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ತಮ್ಮಣ್ಣ, ನಿರಂಜನ್, ವೀರ ಕ್ಯಾತಪ್ಪ, ಶಾಮಣ್ಣ ಶೆಟ್ಟಿ, ರಾಮಲಿಂಗಪ್ಪ, ಮಂಜುನಾಥ ಗುಪ್ತ, ರಂಗಸ್ವಾಮಿ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

Share this article