ಮನೆಗಳಿಗೆ ನುಗ್ಗಿದ ಮಳೆನೀರು

KannadaprabhaNewsNetwork | Published : Oct 9, 2024 1:43 AM

ಸಾರಾಂಶ

ಅರಸೀಕೆರೆ ನಗರದಲ್ಲಿ ಸುರಿದ ಮಳೆಗೆ ಐದು ಮನೆಗಳಿಗೆಸಂಪೂರ್ಣ ಹಾನಿಯಾಗಿ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಎರಡನೇ ವಾರ್ಡಿನಲ್ಲಿ ಐದು ಮನೆಗಳು ಕುಸಿದಿದ್ದು ಘಟನಾಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಂ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಆರ್‌ ಐ ಶಿವಾನಂದ್ ನಾಯ್ಕ ನಗರಸಭೆಯ ಎಇಇ ಸುನಿಲ್, ವಾರ್ಡಿನ ಸದಸ್ಯರಾದ ಕಲೈಅರಸೀ ಸುಧಾಕರ್ ಸೇರಿದಂತೆ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸೋಮವಾರ ರಾತ್ರಿ ನಗರದಲ್ಲಿ ಸುರಿದ ಮಳೆಗೆ ಐದು ಮನೆಗಳಿಗೆಸಂಪೂರ್ಣ ಹಾನಿಯಾಗಿ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಕಳೆದ ಒಂದು ವಾರದಿಂದ ನಗರ ಸೇರಿದಂತೆ ತಾಲೂಕಿನ ಅಲ್ಲಲ್ಲಿ ಮಳೆಯಾಗುತ್ತಿದ್ದು, ನಗರದ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ವರುಣದೇವನ ಅಬ್ಬರ ಕಂಡು ನೂರಾರು ಮಂದಿ ಶಪಿಸುವಂತಾಗಿದೆ. ಎರಡನೇ ವಾರ್ಡಿನಲ್ಲಿ ಐದು ಮನೆಗಳು ಕುಸಿದಿದ್ದು ಘಟನಾಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಂ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಆರ್‌ ಐ ಶಿವಾನಂದ್ ನಾಯ್ಕ ನಗರಸಭೆಯ ಎಇಇ ಸುನಿಲ್, ವಾರ್ಡಿನ ಸದಸ್ಯರಾದ ಕಲೈಅರಸೀ ಸುಧಾಕರ್ ಸೇರಿದಂತೆ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆ ಕಳೆದುಕೊಂಡ ನಿರಾಶ್ರಿತರ ಅಳಲನ್ನು ಆಲಿಸಿದ ನಗರಸಭೆ ಅಧ್ಯಕ್ಷ ಸಮೀವುಲ್ಲಾ ನಿರಾಶ್ರಿತರಿಗೆ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ನಂತರ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ಸಾವು, ನೋವು, ಆಸ್ತಿಪಾಸ್ತಿ ನಷ್ಟಕ್ಕೆ ಕಂದಾಯ ಇಲಾಖೆಯ ಮೂಲಕ ಸರ್ಕಾರ ಸೂಕ್ತ ಪರಿಹಾರ ನೀಡಲಿದ್ದು ಅದನ್ನು ತಮಗೆ ಕೊಡಿಸುವುದಾಗಿ ನಿರಾಶ್ರಿತ ಫಲಾನುಭವಿಗಳಿಗೆ ಭರವಸೆ ನೀಡಿದರು.

ಆರ್‌ಐ ಶಿವಾನಂದ ನಾಯ್ಕ ಮಾತನಾಡಿ ಕಳೆದ ರಾತ್ರಿ ನಗರದಲ್ಲಿ ಸುರಿದ ಮಳೆಗೆ ಕಾಂಚನ, ಕಣಕಮ್ಮ,ಗೀತಮ್ಮ,ಮಾಲಾ ಹಾಗೂ ಶಾಂತಿ ಎಂಬುವವರು ವಾಸಿಸುತ್ತಿದ್ದ ಮನೆ ಸಂಪೂರ್ಣ ಹಾನಿಯಾಗಿದ್ದು, ಸರ್ಕಾರದ ನಿಯಮಾನುಸಾರ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಿದೆ ಎಂದು ಹೇಳಿದರು.ಫೋಟೋ ಶೀರ್ಷಿಕೆ:

ಘಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಆರ್ ಐ ಶಿವಾನಂದ್ ನಾಯ್ಕ ನಗರಸಭೆಯ ಎಇಇ ಸುನಿಲ್, ವಾರ್ಡಿನ ಸದಸ್ಯರಾದ ಕಲೈಅರಸೀ ಸುಧಾಕರ್ ಸೇರಿದಂತೆ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this article