ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ತಹಸೀಲ್ದಾರರಿಗೆ ಮನವಿ
ತಾಲೂಕಿನ ಅಗಳಗಂಡಿ ಪಂಚಾಯ್ತಿ ಕಾರೆಮನೆ ಭಾಗದ ದಲಿತ ಕುಟುಂಬಗಳಿಗೆ ರಸ್ತೆ ಹಾಗೂ ಸೇತುವೆ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಕೊಡುವಂತೆ ಕೊಪ್ಪ ತಾಲೂಕಿನ ತಹಸೀಲ್ದಾರರಿಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ಶುಕ್ರವಾರ ಪತ್ರಮುಖೇನ ಮನವಿ ಸಲ್ಲಿಸಿದರು.ಅಗಳಗಂಡಿ ಪಂಚಾಯಿತಿ ಹೆಗ್ಗಾರುಕೊಡಿಗೆ ಮುಖಾಂತರ ಕಾರೆಮನೆಗೆ ಹೋಗುವ ರಸ್ತೆ ಹಾಗೂ ಕಾರೆಮನೆ ಹೆಗ್ಗಾರಿಗೆ ಹೋಗುವ ರಸ್ತೆ ಸ್ಥಿತಿ ಅತ್ಯಂತ ದುಃಸ್ಥಿತಿಯಲ್ಲಿದೆ. ಈ ಪ್ರದೇಶದಲ್ಲಿ ಸುಮಾರು ೧೦ ದಲಿತ ಕುಟುಂಬಗಳು ವಾಸಿಸುತ್ತಿದ್ದು, ಅವರಿಗೆ ಸರಿಯಾದ ರಸ್ತೆ ಸಂಪರ್ಕವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಮಧ್ಯೆ ಕಾಡಿನ ಹಳ್ಳ ಹರಿಯುತ್ತಿದ್ದು, ಯಾವುದೇ ರೀತಿಯ ಸೇತುವೆ ಅಥವಾ ಸುರಕ್ಷತಾ ವ್ಯವಸ್ಥೆ ಇಲ್ಲದೆ ಜನರು ಅಪಾಯದ ಪರಿಸ್ಥಿತಿಯಲ್ಲಿ ಸಂಚರಿಸ ಬೇಕಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಗಂಭೀರವಾಗುತ್ತದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಮಹಿಳೆಯರು ಕೂಲಿ ಕೆಲಸಕ್ಕೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ.
ಅನಾಹುತ ಸಂಭವಿಸುವ ಭೀತಿ ಹೆಚ್ಚಾಗಿದೆ. ಸ್ವಾತಂತ್ರ‍್ಯ ಬಂದು ಅನೇಕ ವರ್ಷಗಳು ಕಳೆದರೂ ಗ್ರಾಮೀಣ ಪ್ರದೇಶದ ಈ ಜನರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಸುರಕ್ಷಿತ ಸಂಪರ್ಕ ಇಲ್ಲದಿರುವುದು ದುರಾದೃಷ್ಟಕರ. ಆದ್ದರಿಂದ, ದಯವಿಟ್ಟು ತಕ್ಷಣ ಕ್ರಮ ಕೈಗೊಂಡು ಕಾಡಿನ ಹಳ್ಳದ ಮೇಲೆ ಸೇತುವೆ ನಿರ್ಮಾಣ ಮಾಡಿಸುವುದು ಅಥವಾ ಕನಿಷ್ಠ ಮಣ್ಣು ತುಂಬಿಸಿ ರಸ್ತೆ ಸಂಪರ್ಕ ಸುಧಾರಿಸುವುದನ್ನು ಶೀಘ್ರವಾಗಿ ಮಾಡಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಜನರ ಸುರಕ್ಷತೆ ಮತ್ತು ಮೂಲಭೂತ ಹಕ್ಕುಗಳ ದೃಷ್ಟಿಯಿಂದ ಈ ವಿಷಯವನ್ನು ತುರ್ತುವಾಗಿ ಪರಿಗಣಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.