- ಮುಖ್ಯಶಿಕ್ಷಕ ಸೈಯ್ಯಾದ್ ಇಲ್ಯಾಸ್ ಅಹಮದ್, ಸಹಶಿಕ್ಷಕರು, ಎಸ್‌ಡಿಎಂಸಿ ಶ್ರಮಕ್ಕೆ ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನ
ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮವಾದ ಶಿಕ್ಷಣ ನೀಡುತ್ತಾ ಪಟ್ಟಣದಲ್ಲಿರುವ ವಿದ್ಯಾರ್ಥಿಗಳನ್ನು ಮನಸ್ಸನ್ನು ಗ್ರಾಮಾಂತರ ಪ್ರದೇಶದ ಈ ಸರ್ಕಾರಿ ಶಾಲೆಗೆ ಬರುವಂತೆ ಆಕರ್ಷಿಸುವಂತಹ ಮಟ್ಟಕ್ಕೆ ಅಭಿವೃದ್ಧಿ ಕಂಡ ಶಾಲೆಯಾಗಿ ತಾಲೂಕಿನ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲೆ ಗುರುತಿಸಿಕೊಂಡಿದ್ದು, ಅಚ್ಚುಕಟ್ಟುತನದಿಂದ ರಾಜ್ಯದ ಗಮನ ಸೆಳೆಯುತ್ತಿದೆ.
ವಿದ್ಯಾರ್ಥಿಗಳ ಮನಸ್ಸನ್ನು ಮೊದಲ ನೋಟದಲ್ಲೇ ಆಕರ್ಷಿಸುವಂತೆ ಮುಖ್ಯ ಶಿಕ್ಷಕ ಸೈಯ್ಯಾದ್ ಇಲ್ಯಾಸ್ ಅಹಮದ್ ಹಾಗೂ ಶಿಕ್ಷಕರ ಶ್ರಮದಿಂದ ಈ ಶಾಲೆ ವರ್ಷದಿಂದ ವರ್ಷಕ್ಕೆ ತನ್ನ ಸೌಂದರ್ಯ ವೃದ್ಧಿಸಿಕೊಳ್ಳುತ್ತ, ಶಿಕ್ಷಣ ಸಾಧನೆಯಲ್ಲಿ ಮುನ್ನಡೆದಿದೆ. ಆ ಮೂಲಕ ಪ್ರಶಸ್ತಿಗಳನ್ನು ಪಡೆಯುತ್ತಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ವಿದ್ಯಾಭ್ಯಾಸಕ್ಕೆ ಅಗತ್ಯವೆನಿಸಿದ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆಗೆ 2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ದೊರೆತಿದೆ. ₹75 ಸಾವಿರ ನಗದು ಹಣ ಮತ್ತು ಪ್ರಶಸ್ತಿ ಪತ್ರವನ್ನು ಶಾಲೆ ಪಡೆದುಕೊಂಡಿದೆ.ಶಾಲೆಯ ಇತರ ಸಾಧನೆಗಳು:
ಮುಖ್ಯ ಶಿಕ್ಷಕ ಸೈಯಾದ್ ಇಲ್ಯಾಸ್ ಅಹಮದ್ ಅವರ ಸೇವೆ ಗುರುತಿಸಿ ಶಿಕ್ಷಣ ಇಲಾಖೆ 2001ನೇ ಇಸವಿಯಿಂದ ಇಲ್ಲಿಯವರೆಗೆ ಜನಮೆಚ್ಚಿದ ಶಿಕ್ಷಕ, ಗುರುಶ್ರೀ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ, ಕರ್ನಾಟಕ ವಿಕಾಸರತ್ನ, ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಹಸಿರುಪ್ರೇಮ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಒಂದು ಶಾಲೆ ಅಭಿವೃದ್ಧಿಯ ಪಥದತ್ತ ಮುನ್ನಡೆಯಲು ಗ್ರಾಮದ ಜನರ ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಸಹಕಾರಗಳ ಜೊತೆಗೆ ಶಾಲೆ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರ ಕಾಳಜಿಯನ್ನು ಈ ಶಾಲೆಯ ಪ್ರಗತಿಯಲ್ಲಿ ಕಾಣಬಹುದು. ಶಾಲೆಯಲ್ಲಿ ನೀರಿನ ಕೊರತೆ ನೀಗಿಸಲು ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಬೂಬ್ ಖಾನ್ ಅವರು ₹50 ಸಾವಿರ ನೀಡಿದ್ದಾರೆ. ಈ ಹಣದ ಜೊತೆಗೆ ಸಮಿತಿ ಸದಸ್ಯರು ಶಿಕ್ಷಕರು ಸೇರಿ ಕೊಳವೆಬಾವಿ ಕೊರೆಸಿ, ಶಾಲೆಗೆ ನೀರಿನ ಕೊರತೆ ನೀಗಿಸಿರುವುದು ಗಮನೀಯ.
(ಬಾಕ್ಸ್)
ಗ್ರಾಮೀಣ ಪ್ರದೇಶದಲ್ಲಿರುವ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲೆಗೆ 80 ವಿದ್ಯಾರ್ಥಿಗಳು ಚನ್ನಗಿರಿ ಪಟ್ಟಣದಿಂದ ಬರುತ್ತಿರುವುದು ಈ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಸ್ತು ಮತ್ತು ಶೈಕ್ಷಣಿಕ ಪ್ರಗತಿಗೆ ಸಾಕ್ಷಿ. ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಪರಿಶ್ರಮದಿಂದ ಈ ಶಾಲೆ ಪ್ರತಿವರ್ಷ ಒಂದಿಲ್ಲೊಂದು ಸಾಧನೆ ಮೆರೆದು ಪ್ರಶಸ್ತಿ ಪಡೆಯುತ್ತಿದೆ. ಸರ್ಕಾರಿ ಶಾಲೆಯಾಗಿದ್ದರೂ ಗುಣಮಟ್ಟದ ಶಿಕ್ಷಣದಿಂದಾಗಿ ಪೋಷಕರು, ವಿದ್ಯಾರ್ಥಿಗಳ ಮನಗೆದ್ದಿದೆ.
- - -
-17ಕೆಸಿಎನ್ಜಿ1: ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ.-17ಕೆಸಿಎನ್ಜಿ2: ಶಾಲಾ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು.
-17ಕೆಸಿಎನ್ಜಿ3: ಸೈಯ್ಯಾದ್ ಇಲ್ಯಾಸ್ ಅಹಮದ್, ಮುಖ್ಯ ಶಿಕ್ಷಕ.-17ಕೆಸಿಎನ್ಜಿ4: ಹಸಿರಿನಿಂದ ಕೂಡಿದ ಸರ್ಕಾರಿ ಉರ್ದು ಶಾಲೆ ನೋಟ.