ಶಿಗ್ಗಾಂವಿ:ಕಲಿಯುವ ಹುಮ್ಮಸ್ಸಿಗೆ ಮನುಷ್ಯನ ವಯಸ್ಸು ಅಡ್ಡಿಯಾಗದು, ಕಲಿಯುವ ಇಚ್ಛಾಸಕ್ತಿ ಇದ್ದರೆ ಸಾಧನೆಯು ತಾನಾಗಿಯೇ ಒಲಿದು ಬರುತ್ತಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಶಿಕ್ಷಣದ ಮಹತ್ವವನ್ನು ಅರಿತಂತಹ ಡಾ. ಎಫ್.ಜಿ. ಪಾಟೀಲರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನವನ್ನು ಉತ್ತೇಜಿಸಿಕೊಳ್ಳಲು ಸಹಕಾರಿಯಾಗುವಂತೆ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯಶಸ್ವಿಯ ಜೊತೆಗೆ ಬದುಕಿನ, ವೃತ್ತಿ ಜೀವನದಲ್ಲಿಯೂ ಯಶಸ್ವಿ ಕಾಣುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕನ್ನು ನಲಿಸಿದರೆ ಮಾತ್ರ ಪಡೆದ ಪ್ರಶಸ್ತಿಗೆ ಮಹತ್ವ ಬರಲು ಸಾಧ್ಯ ಎಂದರು.ವೇಗವಾಗಿ ಬೆಳೆಯುತ್ತಿರುವ ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಶಹರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕಲಿಕೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಸಾಕಷ್ಟು ಅನಾನುಕುಲತೆಗಳು ಎದುರಾಗುತ್ತವೆ. ಹಳ್ಳಿಗಳಲ್ಲಿಯೂ ಸಹ ಸಾಕಷ್ಟು ಪ್ರತಿಭೆಗಳು ಇದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಐಟಿಐ, ಎನ್‌ಟಿಟಿಎಫ್, ವೆಟರ್ನರಿ ಪಾಲಿಟೆಕ್ನಿಕ್, ಡಿಪ್ಲೋಮಾ, ಸಾರಿಗೆ ಸಂಸ್ಥೆಯ ಚಾಲನಾ ಮತ್ತು ಮೆಕಾನಿಕಲ್ ತರಬೇತಿ ಕೇಂದ್ರ ಸೇರಿದಂತೆ ಶೈಕ್ಷಣಿಕವಾಗಿ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರದಲ್ಲಿ ಪ್ರಾರಂಭಿಸಿ ಬಡ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿರುವ ನಿಟ್ಟಿನಲ್ಲಿ ನಮ್ಮ ಆಡಳಿತಾವಧಿಯಲ್ಲಿ ಕೆಲಸ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಜೀವನ ರೂಪಿಸಿಕೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ.ಎಫ್.ಜಿ. ಪಾಟೀಲ್, ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಎಸ್.ಎಸ್. ದೇಸಾಯಿ, ನಿಂಗನಗೌಡ ದೊಡ್ಡಮನಿ, ಮಲ್ಲಪ್ಪ ರಾಮಗೇರಿ, ಬಸನಗೌಡ ಮೇಲಿನಮನಿ ಸೇರಿದಂತೆ ಇತರರಿದ್ದರು.