ಅಖಿಲ ಹವ್ಯಕ ಮಹಾಸಭಾದಿಂದ ಸಂಸ್ಕಾರೋತ್ಸವಕನ್ನಡಪ್ರಭ ವಾರ್ತೆ ಶಿರಸಿ
ಭಾನುವಾರ ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಹವ್ಯಕ ಮಹಾಸಭಾ, ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ, ಹವ್ಯಕ ವೈದಿಕ ಸಂಘಟನೆ ಹಮ್ಮಿಕೊಂಡಿದ್ದ ಸಂಸ್ಕಾರೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಮೊದಲು ಮನೆಯಿಂದಲೇ ಆಗಬೇಕು. ತಂದೆ-ತಾಯಿ ಸಂಸ್ಕಾರವಂತರಾಗಿ ಮಕ್ಕಳಿಗೆ ಕೊಡಬೇಕು. ನಂತರ ಶಾಲೆಯಲ್ಲಿ ಸಿಗಬೇಕು. ಸಂಸ್ಕಾರಗಳನ್ನು ಎತ್ತಿ ಹೇಳುವುದು ಅತಿ ಮುಖ್ಯ. ಹವ್ಯಕ ಸಮಾಜ ಉಳಿಯಲು ಆರು ಅಂಶ ಮುಖ್ಯ. ದೇವರ ಪೂಜೆ, ಸ್ತೋತ್ರ ಪಠಣ, ಸಂಧ್ಯಾವಂದನೆ, ಯೋಗಾಸನ, ಪ್ರಾಣಾಯಾಮ ಮಾಡಬೇಕು. ಇವು ಬಂದರೆ ಮನೆಯ ವಾತಾವರಣ ಬೇರೆ ಇರುತ್ತದೆ ಎಂದರು.ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಸಂಸ್ಕಾರ ಮಾಡಬೇಕು. ವಿವಾಹ ವಿಳಂಬವಾದರೆ ಸಮಸ್ಯೆ ಹೆಚ್ಚಾಗುತ್ತದೆ. ಕನಿಷ್ಠ ಮೂರು ಮಕ್ಕಳ ಮೂಲಕ ಸತ್ಪ್ರಜೆ ಕೊಡಬೇಕು. ಸಂಸ್ಕಾರ ಹಾಗೂ ಸಂಖ್ಯೆ ಹವ್ಯಕ, ಬ್ರಾಹ್ಮಣ ಸಮಾಜಕ್ಕೆ ಬಲವಾಗುತ್ತದೆ. ಬ್ರಾಹ್ಮಣ ಸಮಾಜವನ್ನು ಇತರರು ಅನುಸರಿಸುವರು. ಈ ಕಾರಣದಿಂದ ಮೊದಲು ಬ್ರಾಹ್ಮಣರು ಸರಿದಾರಿಯಲ್ಲಿ ನಡೆಯಬೇಕು ಎಂದರು.
ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನ ಆಂತರ್ಯದ ಗುರುತೇ ಸಂಸ್ಕಾರ. ಮಾಡುವ ಚಿಂತನೆ, ಕಾರ್ಯ ಅನುಭವ ಗುರುತೇ ಅಭ್ಯಾಸವಾಗಿ, ಸ್ವಭಾವ ಆಗುತ್ತದೆ. ಸ್ವಭಾವ ಗುರುತಾಗುತ್ತದೆ. ಅಂಥ ಸಂಸ್ಕಾರವನ್ನು ಸರಿಯಾಗಿ ರೂಢಿಸಿಕೊಳ್ಳಬೇಕು ಎಂದರು.ಸ್ವರ್ಣವಲ್ಲೀ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನುಡಿದು, ಶಿಕ್ಷಕರು, ವೈದಿಕರು ಸಂಸ್ಕಾರ ಉಳಿಸಿ ಬೆಳೆಸಲು ಕೆಲಸ ಮಾಡಬೇಕು. ಆಗ ಪರಂಪರೆಯ ಬಗ್ಗೆ ಗೌರವ ಬೆಳೆಸುವ ಕಾರ್ಯ ನಡೆಯಲಿದೆ ಎಂದರು.
ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಇಲ್ಲಿ ಬಂದವರಿಗೆ ಸಂಸ್ಕಾರ ಎಂಬುದು ಹೊಸತಲ್ಲ. ಆದರೆ, ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆ ಆಳವಾದ ಚಿಂತನೆ ಬೇಕಾಗಿದೆ. ನಮ್ಮ ಸಂಸ್ಕೃತಿ ಉಳಿಯಬೇಕು ಎಂದರು.ಮಕ್ಕಳಿಂದ ಮೊಬೈಲ್ ದೂರ ಇಡಬೇಕು. ಮೊಬೈಲ್‌ನಲ್ಲಿ ವಿಡಿಯೋ ಗೇಮ್ ನೋಡಿ ಮಕ್ಕಳ ಮಾನಸಿಕ ಸ್ಥಿತಿ ಹಾಗೂ ಸಂಸ್ಕಾರ ಬದಲಾಯಿಸುವ ಅಪಾಯವಿದೆ. ಈ ಅಪಾಯ ತಪ್ಪಿಸಲು ಮೊಬೈಲ್‌ನ ಮೂಲಕವೇ ಸಂಸ್ಕಾರ ಬೆಳೆಸುವ ಸಂದೇಶ ನೀಡುವ ಕಾರ್ಯವನ್ನೂ ಮಾಡಬಹುದು ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸವಾಲುಗಳು ಬಹಳ ದೊಡ್ಡದಿವೆ. ನಮ್ಮ ಸಂಸ್ಕಾರ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕು. ಹಿರಿಯರ ದಾರಿಯಲ್ಲಿ ಮುಂದಿನ ಪೀಳಿಗೆಯು ನಡೆಯುವಂತೆ ಆಗಬೇಕು ಎಂದರು.ಸನ್ಮಾನಿತರ ಪರವಾಗಿ ಗಣಪತಿ ಭಟ್ಟ ಕಿಬ್ಬಳ್ಳಿ ಮಾತನಾಡಿ, ಹವ್ಯಕರ ಸಂಸ್ಕೃತಿಯು ಕೃಷಿ, ಋಷಿಯ ಮೇಲೆ ಇದೆ. ಕೃಷಿಯು ರೋಗದಿಂದ ಅದಾಗೆ ಬಿಡುತ್ತಿದೆ. ಋಷಿಗಳನ್ನು ನಾವಾಗಿ ಬಿಡುತ್ತಿದ್ದೇವೆ. ಎರಡೂ ತಪ್ಪಿದರೆ ಹವ್ಯಕರ ಅಸ್ಮಿತೆ ಉಳಿಯುವುದಿಲ್ಲ ಎಂದರು.
ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ಆರ್.ಎಂ. ಹೆಗಡೆ ಬಾಳೇಸರ ಮತ್ತಿತರರು ಇದ್ದರು. ರಾಜೇಶ್ವರಿ ಹೆಗಡೆ ಪ್ರಾರ್ಥಿಸಿದರು. ಡಿ.ಪಿ. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಾಂತ ಭಟ್ಟ ಹುಬ್ಬಳ್ಳಿ ಅನಿಸಿಕೆ ವ್ಯಕ್ತಪಡಿಸಿದರು. ಭಾಸ್ಕರ ಗಾಂವಕರ, ಜಿ.ಎಸ್. ಭಟ್ಟ ನಿರ್ವಹಿಸಿದರು. ಮಹಾಸಭೆಯ ಅಧ್ಯಕ್ಷ ಗಿರಿಧರ ಕಜೆ ಅವರ ಧ್ವನಿ ಸಂದೇಶ ಬಿತ್ತರಿಸಲಾಯಿತು. ಸುಧಾ ಶರ್ಮ ಚವತ್ತಿ, ರಾಮಕೃಷ್ಣ ಭಟ್ಟ, ವಿ.ಉಮಾಕಾಂತ ಭಟ್ಟ ಕೆರೇಕೈ, ನೀರ್ಗಾನ್ ವಿಶ್ವನಾಥ ಭಟ್ಟ, ಡಾ. ಆರತಿ ವಿ.ಬಿ. ಅವರಿಂದ ವಿವಿಧ ಮಹತ್ವದ ಗೋಷ್ಠಿ ನಡೆದವು. ತುಳಸಿ ಹೆಗಡೆ ತಂಡದಿಂದ ಯಕ್ಷ ರೂಪಕ, ತೋಟಿಮನೆ ಗಣಪತಿ ಹೆಗಡೆ ಸಂಗಡಿಗರಿಂದ ಯಕ್ಷ ನೃತ್ಯ ಸಿಂಚನ, ಶಿಕ್ಷಕಿಯರಿಂದ ಜಾನಪದ ನೃತ್ಯ ನಡೆಯಿತು.ಹವ್ಯಕ ಸಾಧಕರಿಗೆ ಸನ್ಮಾನ
ವೇದಮೂರ್ತಿಗಳಾದ ಕಿಬ್ಬಳ್ಳಿ ಗಣಪತಿ ಭಟ್ಟ ಸೂರ್ಯನಾರಾಯಣ ಭಟ್ಟ ನೆಲೆಮಾವು, ನಾರಾಯಣ ಭಟ್ಟ ಮೊಟ್ಟೆಗದ್ದೆ, ಮಂಜುನಾಥ ಭಟ್ಟ ಕಲ್ಲಾಳ, ರಾಮಕೃಷ್ಣ ಭಟ್ಟ ಕೆಳಗಿನಪಾಲು, ತಿಮ್ಮಪ್ಪ ಭಟ್ಟ ಸಾರಂಗ, ಶಿಕ್ಷಕರಾದ ಕೆ.ವಿ. ಭಟ್ಟ, ಗೌರಿ ಹೆಗಡೆ ಹುತಗಾರ, ಸೀತಾ ಭಟ್ಟ, ನಾರಾಯಣ ಭಟ್ಟ ಯಲ್ಲಾಪುರ, ಮಹಾಲಕ್ಷ್ಮಿ ಹೆಗಡೆ ಉಮ್ಮಚಗಿ, ಜನಾರ್ದನ ಹೆಗಡೆ ಜೋಯಿಡಾ, ಮಂಜುನಾಥ ಯಾಜಿ, ಮಾಯಾ ಭಟ್ಟ ಸಿದ್ದಾಪುರ, ಜಿ.ಆರ್. ಭಾಗವತ್ ತ್ಯಾರಗಲ್ ಅವರನ್ನು ಸನ್ಮಾನಿಸಲಾಯಿತು.