ಮಕ್ಕಳ ಭವಿಷ್ಯ ಸಂರಕ್ಷಿಸಲು ಪೋಲಿಯೋ ಹಾಕಿಸಿ: ಮುಂಡರಗಿ ನಾಗರಾಜ

KannadaprabhaNewsNetwork |  
Published : Dec 22, 2025, 02:15 AM IST
ಬಳ್ಳಾರಿಯ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿದರು.  | Kannada Prabha

ಸಾರಾಂಶ

ಮಕ್ಕಳ ಅಂಗವೈಕಲ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳ ಭವಿಷ್ಯ ಸಂರಕ್ಷಿಸಲು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಡಾ. ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಕರೆ ನೀಡಿದರು.

ಬಳ್ಳಾರಿ: ಮಕ್ಕಳ ಅಂಗವೈಕಲ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳ ಭವಿಷ್ಯ ಸಂರಕ್ಷಿಸಲು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಡಾ. ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಸ್ಪತ್ರೆಯ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಪರಿಣಾಮಕಾರಿಯಾಗಿ ಸ್ವ-ಇಚ್ಛೆಯಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಶ್ರಮ ವಹಿಸಿ ಪೋಲಿಯೋ ಪ್ರಕರಣಗಳನ್ನು ತಡೆಯುಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಬೇರೆ ಬೇರೆ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಜಾಗೃತಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಪೋಲಿಯೋ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಲ್ಲಿನ ಪ್ರದೇಶಗಳಿಗೆ ಹೆಚ್ಚಿನ ಆಶಾ ಕಾರ್ಯರ್ತರನ್ನು ನಿಯೋಜಿಸಿ ಮನೆ-ಮನೆಗೆ ಹೋಗಿ ಲಸಿಕೆ ಹಾಕಲು ಕ್ರಮವಹಿಸಬೇಕು ಎಂದು ಹೇಳಿದರು.

ಹುಟ್ಟಿನಿಂದ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಬಹುಮುಖ್ಯವಾಗಿದ್ದು, ಡಿ. 21ರಿಂದ ಡಿ. 24ರ ವರೆಗೆ ನಡೆಯುವ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪೋಷಕರು ತಮ್ಮ ಮಕ್ಕಳನ್ನು ಹಾಗೂ ನೆರೆ-ಹೊರೆಯವರಿಗೂ ಈ ಮಾಹಿತಿ ತಿಳಿಸಿ ಲಸಿಕೆ ಹಾಕಿಸಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಪೋಲಿಯೋ ಪ್ರಕರಣಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ನಮ್ಮ ದೇಶ ಯಶಸ್ವಿಯಾಗಿದೆ. ನೂರು ಕೋಟಿಗಿಂತ ಹೆಚ್ಚಿನ ಜನ ಸಂಖ್ಯೆ ಇರುವ ನಮ್ಮ ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಸವಾಲಿನ ಕೆಲಸವಾಗಿದ್ದು, ಆರೋಗ್ಯ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗಳು, ಸಿಬ್ಬಂದಿ ಪೋಲಿಯೋ ಬಗ್ಗೆ ಜಾಗೃತಿ ಮೂಡಿಸಿ ಕಾರ್ಯ ನಿರ್ವಹಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಮಾತನಾಡಿ, ಪ್ರತಿವರ್ಷ ಆರೋಗ್ಯ ಇಲಾಖೆಯಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಪೋಲಿಯೋ ಖಾಯಿಲೆ ನಿರ್ಮೂಲನೆ ಮಾಡಲು ಎರಡು ಹನಿ ಪೋಲಿಯೋ ಲಸಿಕೆ ಅತ್ಯಗತ್ಯವಾಗಿದೆ. ಮಕ್ಕಳಿಗೆ ಬರುವ ವಿವಿಧ ಅಂಗವೈಕಲ್ಯ ಹೋಗಲಾಡಿಸಲು ಸಮುದಾಯದವರು 5 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ವಿವಿಧ ಹಂತದ ವಯಸ್ಸಿನ ಮಕ್ಕಳಿಗೆ ಅವಶ್ಯವಿರುವ ಲಸಿಕೆಗಳನ್ನೂ ತಪ್ಪದೇ ಹಾಕಿಸಬೇಕು ಎಂದು ತಾಯಂದಿರಲ್ಲಿ ವಿನಂತಿ ಮಾಡಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗಣ್ಯರು ಸೇರಿದಂತೆ ವೈದ್ಯಾಧಿಕಾರಿಗಳು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಪಲ್ಸ್ ಪೋಲಿಯೋ ಪೋಸ್ಟರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಚಿಗುರು ಕಲಾ ತಂಡದ ಎಸ್.ಎನ್. ಹುಲುಗಪ್ಪ ಮತ್ತು ಸಂಗಡಿಗರು ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಉಪಮೇಯರ್ ಮೊಬಿನಾ, ಸದಸ್ಯ ಅಶೋಕ್ ಕುಮಾರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝಬೇರ್, ಡಿಎಚ್‌ಒ ಡಾ. ವೈ. ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದಾ ಬೇಗಂ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು, ಶೂಸ್ರೂಶಕರು, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌