ಕನ್ನಡಪ್ರಭ ವಾರ್ತೆ ಮೈಸೂರುಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರು ಹಾಗೂ ಸುಪ್ರೀಂ ಕೋಟ್೯ನ ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಅವರು ತಿಳಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುದ್ಧಗಳು ಉದ್ದೇಶಪೂರಿತವಾಗಿ ನಡೆದು ಹಲವರು ಜನರು ಸವಾನ್ನಪ್ಪುತ್ತಾರೆ. ರಸ್ತೆ ಅಪಘಾತದಲ್ಲಿ ಯಾವುದೇ ಉದ್ದೇಶವಿಲ್ಲದೆ ಅಂದಾಜು ದೇಶದಲ್ಲಿ ಪ್ರತಿ ವರ್ಷ ಅಂದಾಜು 2 ಲಕ್ಷ ಜನರು ಮರಣ ಹೊಂದುತ್ತಾರೆ ಎಂದರೆ ಇದು ಚಿಂತಿಸುವ ವಿಷಯವಾಗಿದೆ ಎಂದರು.ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೇ ಇರುವುದು, ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ರಸ್ತೆ ಅಪಘಾತ ಹಾಗೂ ರಸ್ತೆ ಅಪಘಾತದ ಮರಣಕ್ಕೆ ಮುಖ್ಯ ಕಾರಣವಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು ಎಂಬುವುದು ಸಾಮಾನ್ಯ ಜ್ಞಾನ. ಇದಕ್ಕೆ ಯಾವುದೇ ಪದವಿ ಬೇಡ. ಹೆಚ್ಚು ವಿದ್ಯಾವಂತರು ಸಹ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದೇ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವ ಉದಾಹರಣೆಗಳಿವೆ. ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲನೆ ಮಾಡುವ ರೀತಿ ಮನಸ್ಥಿತಿ ಬದಲಾವಣೆ ಮಾಡಬೇಕು. ಇದಕ್ಕೆ ಇರುವ ದಾರಿ ಎಂದರೆ ಒಂದು ಜಾಗೃತಿ ಮೂಡಿಸುವುದು ಇನ್ನೊಂದು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಾಗಿ ಸಂಚಾರಿ ನಿಯಮ ಜಾರಿಗೊಳಿಸುವುದು ಎಂದರು.ಕಳೆದ 5 ವರ್ಷಗಳಿಂದ ಹೆಚ್ಚು ರಸ್ತೆ ಅಫಘಾತಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ 5 ನೇ ಸ್ಥಾನ ಹಾಗೂ ಮೈಸೂರು ಜಿಲ್ಲೆ 10ನೇ ಸ್ಥಾನದೊಳಗಿದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗುಣಮಟ್ಟದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳು ಮತ್ತು ಬ್ಲ್ಯಾಕ್ ಸ್ಪಾಟ್ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.ಮೈಸೂರು ಜಿಲ್ಲೆ ಪ್ರವಾಸಿ ತಾಣವಾಗಿದ್ದು, ಖಾಸಗಿ ಬಸ್ ಗಳ ಸಂಚಾರ ಹೆಚ್ಚಿರುತ್ತದೆ. ಖಾಸಗಿ ಬಸ್ ಗಳು ಉತ್ತಮ ಸ್ಥಿತಿಯಲ್ಲಿರುವ ಬಗ್ಗೆ ಹಾಗೂ ಸರ್ಕಾರ ವಿಧಿಸಿರುವ ನಿಯಮಗಳ ಪಾಲನೆ, ವಾಹನ ಚಾಲಕರ ಪರವಾನಗಿ ಹಾಗೂ ವಾಹನ ವಿಮೆಯ ಬಗ್ಗೆ ನಿಗದಿತವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಹೇಳಿದರು.ನಗರ ಪ್ರದೇಶಗಳಿಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರಸ್ತೆ ಅಪಘಾತವಾಗಿ ಜನರುಮರಣ ಹೊಂದುತ್ತಾರೆ. ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲೂ ಆಯೋಜಿಸಬೇಕು. ಜಾಗೃತಿ ಮೂಡಿಸಲು ಹೆಚ್ಚಿನ ಜನರನ್ನು ಆಕರ್ಷಿಸುವ ರೀತಿ ತಾಂತ್ರಿಕ ಸಂಚಾರಿ ಪಾಕ್೯ ನಿರ್ಮಿಸಿ ಸಂಚಾರಿ ನಿಯಮಗಳನ್ನು ತಿಳಿಸಿ ಎಂದರು.ಸರ್ಕಾರಿ ಕಚೇರಿಗಳು, ದೊಡ್ಡ ಕಂಪನಿಗಳು ಶಾಲಾ ಕಾಲೇಜುಗಳಿಗೆ ಬರುವ ದ್ವಿಚಕ್ರ ವಾಹನಗಳಲ್ಲಿ ಬರುವ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿದಿನ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸಭೆ ನಡೆಸಿ ಮುಖ್ಯಸ್ಥರಿಗೆ ತಿಳಿಸಿ ಹೆಲ್ಮೆಟ್ ಧರಿಸುವುದನ್ನು ರೂಢಿಸುವ ಪ್ರಯತ್ನ ಮಾಡಿ ಎಂದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು 2020 ರಿಂದ 2025 ರವರೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳು, ಮರಣ ಹೊಂದಿದವರ ಸಂಖ್ಯೆ, ಗುರುತಿಸಿರುವ ಬ್ಲ್ಯಾಕ್ ಸ್ಪಾಟ್ ಗಳು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಟ್ಕಾರ್ ಅವರು ಮೈಸೂರು ನಗರ ಪ್ರದೇಶದ ಮುಖ್ಯ ಭಾಗಗಳಲ್ಲಿ ಅಳವಡಿಸಿರುವ ಕ್ಯಾಮರಾಗಳು ಹಾಗೂ ಹೆಚ್ಚಿನ ಅಪಘಾತಗಳಾಗುವ ರಸ್ತೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.ಸಭೆಯಲ್ಲಿ ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮೊದಲಾದವರು ಇದ್ದರು.