ಕಾರಟಗಿ: ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಲೋಪವಾಗಿಲ್ಲ, ಇನ್ನೂ ಗೃಹಲಕ್ಷ್ಮೀ ಯೋಜನೆಯಲ್ಲಿ ಹಗರಣ ಆಗಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಮಾಡಲು ಯಾವುದೇ ಕೆಲಸವಿಲ್ಲದಕ್ಕೆ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಪ್ರತಿ ತಿಂಗಳ ಗೃಹಲಕ್ಷ್ಮೀ ಹಣ ಡಿಬಿಟಿ ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಯಾಗುತ್ತಿದೆ. ಫೆಬ್ರುವರಿ ಮತ್ತು ಮಾರ್ಚ್ ಈ ಎರಡು ತಿಂಗಳ ಬಾಬತ್ತು ಪಾವತಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಹಣಕಾಸು ಇಲಾಖೆಯಲ್ಲಿ ತಾಂತ್ರಿಕ ತೊಂದರೆಯಾಗಿದೆ. ಸಮಸ್ಯೆ ಸರಿ ಮಾಡಿ ಹಣ ಸಂದಾಯ ಮಾಡುವ ಕೆಲಸ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದರು.
ಬಿಜೆಪಿಯವರಿಗೆ ಯಾವ ಕಮಾಂಡ್ ಇದೆ? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಏನು ಕೆಲಸವಿದೆ? ಬೇರೆ ಪಕ್ಷದವರ ಹೈಮಾಂಡ್ ವಿಷಯ ಇವರಿಗೆ ಯಾಕೆ ಎಂದು ತಂಗಡಗಿ ಪ್ರಶ್ನೆ ಮಾಡಿದರು.ಅವರು ನಮ್ಮ ಪಕ್ಷದ ಹೈಕಮಾಂಡ್ ಬಗ್ಗೆ ಮಾತಾಡ್ತಾರೆ, ಆದರೆ ಅವರ‍್ಯಾರಿಗೂ ತಮ್ಮ ಪಕ್ಷದ ಹೈಕಮಾಂಡ್ ಬಳಿ ಹೋಗಿ ಮಾತನಾಡುವ ಧೈರ್ಯವಿಲ್ಲ. ವೋಟ್ ಚೋರಿ, ಇವಿಎಂ ಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತ ಹಾಕಿದ್ದು ನಿರ್ಧಾರವಾಗಲಿ, ಅವರ ಬಣ್ಣ ಬಯಲಾಗುತ್ತದೆ ಎಂದು ತಂಗಡಗಿ ಹೇಳಿದರು.
ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನರ್ ಆಪರೇಟರ್ ಇಲ್ಲದ್ದು ಗಮನಕ್ಕೆ ಬಂದಿದೆ. ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಪೂರೈಕೆ ಸೂಕ್ತವಾಗಿ ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದರು.ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ನೌಕರರ ಅಭಾವವಿದೆ. ಶೀಘ್ರದಲ್ಲೆ ಹುದ್ದೆ ಭರ್ತಿ ಮಾಡಲಾಗುತ್ತದೆ. ಕೆಲವೊಂದು ತುರ್ತಾಗಿ ಬೇಕಾದ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡುತ್ತೇವೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಂಗ್ರಹಣೆ ಇದೆ. ವಿತರಣೆಯಲ್ಲಿ ವಿಳಂಬವಾಗಿರಬಹುದು. ಔಷಧ ಕಾಲ ಕಾಲಕ್ಕೆ ಕೊಡುವ ಕೆಲಸ ಮಾಡುತ್ತೇವೆ ಎಂದರು.
ನಾಳೆ ಭೂಮಿಪೂಜೆ: ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಅತಿ ಶೀಘ್ರದಲ್ಲಿ ಕೆಲಸ ಆರಂಭವಾಗುತ್ತದೆ. ಅಲ್ಲದೆ ಪಟ್ಟಣದಲ್ಲಿ ೧೦೦ ಹಾಸಿಗೆ ಆಸ್ಪತ್ರೆಯ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನಡೆಸಲಾಗುವುದು. ಪ್ರಜಾಸೌಧದ ಟೆಂಡರ್ ಮುಗಿದಿದ್ದು, ಅದು ಕೂಡ ಕೆಲಸ ಆರಂಬಿಸಲಾಗುವುದು. ಈಗಾಗಲೇ ಮುಖಮಂತ್ರಿಗಳು ಭೂಮಿಪೂಜೆ ನಡೆಸಿದ್ದಾರೆ. ಸೋಮವಾರ ಕೆಲಸ ಆರಂಭಕ್ಕೆ ಭೂಮಿಪೂಜೆ ನಡೆಸಲಾಗುವುದು ಎಂದರು.ಈ ವೇಳೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಎಸ್ಪಿಡಾ. ರಾಮ್ ಎಲ್. ಅರಸಿದ್ಧಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೋಸುರ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.