ಹಾವೇರಿ: ಪತ್ರಕರ್ತರು ಸಮಾಜದ ಕಣ್ಣು, ಕಿವಿ ಇದ್ದಂತೆ. ಜನಸಾಮಾನ್ಯರು ಎದುರಿಸುವ ಸಮಸ್ಯೆಗಳ ವಸ್ತುನಿಷ್ಠ ವರದಿಗೆ ಅಧಿಕಾರಿ ವರ್ಗ ಸ್ಪಂದಿಸುತ್ತದೆ. ನಾವು, ನೀವು ಒಗ್ಗಟ್ಟಾಗಿ ಸಮಾಜ ಸುಧಾರಿಸುವ ಕೆಲಸ ಮಾಡೋಣ ಎಂದು ಜಿಪಂ ಸಿಇಒ ರುಚಿ ಬಿಂದಲ್ ಹೇಳಿದರು. ನಗರದ ಸಜ್ಜನರ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ವ್ಯಕ್ತಿ ಸಮಾಜದ ಕಣ್ಣು. ಸಂಪಾದಕೀಯ ಪುಟದ ವಿಮರ್ಶಾತ್ಮಕ ವರದಿ ನನಗೆ ಬಹಳಷ್ಟು ಕಲಿಸಿಕೊಟ್ಟಿದೆ. ಇತ್ತೀಚಿನ ಸಾಮಾಜಿಕ ಜಾಲತಾಣ ಮಾಧ್ಯಮದ ಹಾವಳಿಯಿಂದಾಗಿ ಮುದ್ರಣ ಮಾಧ್ಯಮ ಸಮಸ್ಯೆ ಎದುರಿಸುವಂತಾಗಿದೆ. ಈ ಸಮಾಜಕ್ಕೆ ಏನು ಕೊಡಬೇಕು, ಏನು ಕೊಡಬಾರದು ಎಂಬ ಜವಾಬ್ದಾರಿ ಪತ್ರಿಕೆಗಳ ಮೇಲೆ ಇದೆ. ಪ್ರತಿದಿನ ಬೆಳಗಾದರೆ ಪತ್ರಿಕೆ ಓದದೇ ಇದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಪ್ರಜಾಪ್ರಭುತ್ವ ನಾಲ್ಕನೇ ಅಂಗ ಪತ್ರಿಕೋದ್ಯಮದ ಮೇಲೆ ಸಮಾಜದ ಕಾಳಜಿ ಅಪಾರವಾಗಿದೆ. ಬರುವ ದಿನಗಳಲ್ಲಿ ಸಂಘದಿಂದ ಒಳ್ಳೆಯ ಕೆಲಸವಾಗಲಿ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಮಾತನಾಡಿದರು. ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ರಾಜ್ಯ ಕಾರ್ಯದರ್ಶಿಗಳಾದ ನಿಂಗಪ್ಪ ಚಾವಡಿ, ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜೆ. ಅಬ್ಬಾಸ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ ಹಾಗೂ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಭೂಮಿಕಾ ರಜಪೂತ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ನಾರಾಯಣ ಹೆಗಡೆ ಸ್ವಾಗತಿಸಿದರು. ಖಜಾಂಚಿ ಬಸವರಾಜ ಮರಳಿಹಳ್ಳಿ, ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.ಸಮಾಜದ ದನಿಯಾಗಿ ಕೆಲಸ ಮಾಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಹಳೆ ಬೇರು ಹೊಸ ಚಿಗುರು ಎಂಬಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು. ಮೂರು ವರ್ಷದ ಅವಧಿಯಲ್ಲಿ ಸಂಘಟನೆ ಮತ್ತಷ್ಟು ಬಲಪಡಿಸಬೇಕು. ಸಂಘಟನೆಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಇತ್ತೀಚೆಗೆ ಪತ್ರಕರ್ತ ಎಂದು ಗುರುತಿಸಿಕೊಳ್ಳಲು ಸಾಕಷ್ಟು ಜನ ಸುದ್ದಿ ಮನೆಗೆ ಬರುತ್ತಿದ್ದಾರೆ. ಸುಳ್ಳು, ಜೊಳ್ಳು ಹಾಗೂ ಕ್ರಿಮಿನಲ್ ಪತ್ರಕರ್ತರು ಬರುತ್ತಿದ್ದಾರೆ. ಆದರೆ ಅವರಿಗೆ ಗಂಧ ಗಾಳಿ ಗೊತ್ತಿರುವುದಿಲ್ಲ, ಅಂತಹವರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಬರವಣಿಗೆ ಮೂಲಕವೇ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಬೆಳೆಯಬೇಕು. ಸಮಾಜದಲ್ಲಿ ವಿಶ್ವಾಸಾರ್ಹತೆ ಮೂಡಿಸುವ ಪತ್ರಕರ್ತರು ಬೇಕು. ವಿಶ್ವಾಸಾರ್ಹತೆ ವರದಿ ಬರೆಯುವ ವರದಿಗಾರರು ಬೇಕು. ಕಟ್ಟಕಡೆಯ ವ್ಯಕ್ತಿಯ ದನಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ನಾಲ್ಕನೇ ಅಂಗ ಪತ್ರಿಕಾರಂಗ. ಜಗತ್ತಿನ ವಸ್ತು ಸ್ಥಿತಿ ಅರಿಯಲು ಪತ್ರಿಕೆಗಳು ಬೇಕೆ ಬೇಕು. ಜಗತ್ತಿನಲ್ಲಿ ನಡೆಯುವ ಹೊಸ ವಿಷಯಗಳನ್ನು ಅರಿಯಲು ಪತ್ರಿಕೆ ಬೇಕು. ಪತ್ರಕರ್ತರು ವಸ್ತುನಿಷ್ಠತೆ ಅರಿತು ವರದಿ ಬರೆಯಬೇಕು, ಅಂದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಅಪರ ಜಿಲ್ಲಾಧಿಕಾರಿ ನಾಗರಾಜ್ ಎಲ್. ಹೇಳಿದರು.