ನಾಡಿನ ಅಂಧಕಾರ ಕಳೆದು, ಅಸಮಾನತೆ ತೊಲಗಿಸಿ ಸತ್ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಕಾಯಕವೇ ಕೈಲಾಸ ಎಂಬುದು ಬರಿ ಮಾತಾಗದೇ ಕಾರ್ಯರೂಪಕ್ಕೆ ತರೋಣ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ ಸಿ. ಸೋಮಶೇಖರ ಕರೆ ನೀಡಿದರು.
ಹಾನಗಲ್ಲ: ನಾಡಿನ ಅಂಧಕಾರ ಕಳೆದು, ಅಸಮಾನತೆ ತೊಲಗಿಸಿ ಸತ್ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಕಾಯಕವೇ ಕೈಲಾಸ ಎಂಬುದು ಬರಿ ಮಾತಾಗದೇ ಕಾರ್ಯರೂಪಕ್ಕೆ ತರೋಣ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ ಸಿ. ಸೋಮಶೇಖರ ಕರೆ ನೀಡಿದರು.
ಭಾನುವಾರ ಪಟ್ಟಣದ ಶಂಕರ ಮಂಗಲ ಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ೨ನೇ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದ್ದು, ಅವುಗಳ ಮರುಸ್ಥಾಪನೆಯಾಗಬೇಕಿದೆ. ನಿರಹಂಕಾರ ಭಾವದಿಂದ ಅಧಿಕಾರ, ಸಂಪತ್ತಿನ ಆಕರ್ಷಣೆಗಿಂತ ಮೌಲ್ಯಗಳ ಬಲವರ್ಧನೆಗೆ ಮಹತ್ವ ನೀಡಬೇಕಿದೆ. ದಯಾಭಾವನೆ ನಮ್ಮನ್ನು ದ್ವೇಷ ಮತ್ತು ಅಸೂಯೆಯಿಂದ ಮುಕ್ತಗೊಳಿಸುತ್ತದೆ. ಅಂತಃಕರಣವಿಲ್ಲದ ಧರ್ಮ ಧರ್ಮವೇ ಅಲ್ಲ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಗುರುಕುಲ ಸಂಸ್ಕೃತಿಯಂತೆ ಆಚರಣೆಗಳು ಆರಂಭಗೊಳ್ಳಬೇಕು. ಮಕ್ಕಳಿಗೆ ಮೊಬೈಲ್ ಕೊಡುವ ಬದಲು ವಚನಗಳ ಪುಸ್ತಕ ಕೊಡಬೇಕು. ಸಪ್ತ ಸೂತ್ರಗಳು ಬಸವಣ್ಣನವರು ವಿಶ್ವಕ್ಕೆ ಕೊಟ್ಟ ನೈತಿಕ ಸಂವಿಧಾನವಾಗಿದೆ. ಜಗತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ ಸೂಚಿಸಲಾಗಿದೆ. ಬಸವ ತತ್ವ ಪಾಲನೆಯಿಂದ ಶಾಂತಿ, ಸಮಾಧಾನ ದೊರಕಲಿದ್ದು, ಸಮಾನತೆ ಸಾಧ್ಯವಾಗುತ್ತದೆ ಎಂದರು. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ನಮ್ಮ ಬದುಕಿನಲ್ಲಿ ಸರಳತೆ ಅಳವಡಿಸಿಕೊಳ್ಳಬೇಕು. ನುಡಿಯಂತೆ ನಡೆ ಇರಬೇಕು. ನಡೆ-ನುಡಿಗಳೊಂದಾಗಿರಬೇಕು. ಪ್ರತಿ ಮನೆಯೂ ಶರಣ ತತ್ವದ ಪಾಲನೆಯ ಮನೆಯಾಗಬೇಕು. ಅಹಂಕಾರರಹಿತರಾಗಿ ಜೀವನ ಸಾಗಿಸುವಂತಾದರೆ ಬದುಕಿಗೆ ಅರ್ಥ ಮೂಡುತ್ತದೆ. ಮಠಗಳು ವಚನ ಸಾಹಿತ್ಯ ಪ್ರಸಾರಕ್ಕೆ ಹೆಚ್ಚು ಕೊಡುಗೆ ನೀಡುತ್ತಿವೆ ಎಂದು ಹೇಳಿದರು.ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ, ಶರಣ ಸಾಹಿತ್ಯದ ನಿಜವಾದ ರುಚಿಯನ್ನು ಸಮಾಜಕ್ಕೆ ತಲುಪಿಸಬೇಕು. ಮಕ್ಕಳಿಗಾಗಿ ವಚನ ಸಾಹಿತ್ಯದ ಪ್ರಸಾರ ಅತ್ಯವಶ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಮೂಡಿಸಬೇಕಾಗಿದೆ. ಸಂಸ್ಕಾರವಂತರನ್ನಾಗಿ ಬೆಳೆಸಬೇಕಾಗಿದೆ. ಮುಂದಿನ ವರ್ಷ ಜಿಲ್ಲಾ ಮಟ್ಟದ ಮಕ್ಕಳ ವಚನ ಸಾಹಿತ್ಯ ಸಮ್ಮೇಳನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಸಮ್ಮೇಳನಾಧ್ಯಕ್ಷೆ ನೀಲಮ್ಮ ಉದಾಸಿ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ, ಶಸಾಪ ರಾಜ್ಯ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಶಸಾಪ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ಕೊಟ್ರೇಶ ಬಿಜಾಪುರ, ಎಚ್.ಎಚ್. ರವಿಕುಮಾರ, ಗುರುನಾಥ ಗವಾಣಿಕರ, ಎಸ್.ಸಿ. ಕಲ್ಲನಗೌಡ್ರ ಅತಿಥಿಗಳಾಗಿದ್ದರು. ಸುಭಾಸ ಹೊಸಮನಿ ಸ್ವಾಗತಿಸಿದರು. ರವಿಬಾಬು ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರಂಜನ ಗುಡಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್. ಅಮರದ ವಂದಿಸಿದರು. ದತ್ತಿನಿಧಿ: ಇದೇ ಸಂದರ್ಭದಲ್ಲಿ ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಒಂದು ಲಕ್ಷರು.ಗಳ ದತ್ತಿನಿಧಿ ನೀಡುವುದಾಗಿ ಘೋಷಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.