ಬಳ್ಳಾರಿ: ಸಿರುಗುಪ್ಪ ತಾಲೂಕಿನ ಶಿಂದಿಗೇರಿ ಬಳಿಯ ಟಿಇಎಚ್ಆರ್‌ಡಿ ಟ್ರಸ್ಟ್‌ನ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಡಿ. 24ರಂದು ವಿವಿಯ ಮೌಂಟ್‌ವ್ಯೂ ಕ್ಯಾಂಪಸ್‌ನಲ್ಲಿ ಜರುಗಲಿದೆ ಎಂದು ವಿವಿಯ ಕುಲಪತಿ ಡಾ. ಟಿ.ಎನ್. ನಾಗಭೂಷಣ ಹಾಗೂ ಕುಲಾಧಿಪತಿ ಡಾ. ಯಶ್ವಂತ್ ಭೂಪಾಲ್ ತಿಳಿಸಿದರು.
ಘಟಿಕೋತ್ಸವದಲ್ಲಿ ಎಂಸಿಎ ಕೋರ್ಸ್‌ಗಳ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಎಂಬಿಎ ವಿಭಾಗದಲ್ಲಿ ಶಬನಾ ಅವರು 9.33 ಸಿಜಿಪಿಎದೊಂದಿಗೆ ಪ್ರಥಮ ರ್‍ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಸೌಗಂಧಿಕ ಲಕ್ಷ್ಮೀ 9.27 ಸಿಜಿಪಿಎದೊಂದಿಗೆ ದ್ವಿತೀಯ ರ್‍ಯಾಂಕ್ ಪಡೆದು ಬೆಳ್ಳಿಯ ಪದಕ ಪಡೆದಿದ್ದಾರೆ. ಎಂಸಿಎ ವಿಭಾಗದಲ್ಲಿ ಸಜ್ಜ ಜಗತಿ ಅವರು ಅತ್ಯುತ್ತಮ 9.82 ಸಿಜಿಪಿಎದೊಂದಿಗೆ ಪ್ರಥಮ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕ ಹಾಗೂ ಸಂಧ್ಯಾ ಜಿ. ಅವರು 9.66 ಸಿಜಿಪಿಎದೊಂದಿಗೆ ದ್ವಿತೀಯ ರ್‍ಯಾಂಕ್ ಪಡೆದು ಬೆಳ್ಳಿಯ ಪದಕ ಪಡೆದಿದ್ದಾರೆ. ಶೈಕ್ಷಣಿಕವಾಗಿ ಸಾಧನೆ ಮಾಡಿದ ಈ ಎಲ್ಲ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪದಕಗಳನ್ನು ಪ್ರದಾನ ಮಾಡುವ ಮೂಲಕ ಗೌರವಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀಗಳಿಗೆ ಗೌರವ ಡಾಕ್ಟರೇಟ್:ಸಮಾಜದ ನೈತಿಕ, ಆಧ್ಯಾತ್ಮಿಕ ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ದೀರ್ಘಕಾಲದಿಂದ ಅಪಾರ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ವಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಕಿಷ್ಕಿಂದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪದವಿ ನೀಡಲು ನಮಗೆ ಹೆಚ್ಚು ಸಂತಸ ತಂದಿದೆ. ಧಾರ್ಮಿಕ, ಸೌಹಾರ್ದತೆ, ಸಮಾಜಸೇವೆ, ಶಿಕ್ಷಣ ಪ್ರೋತ್ಸಾಹ ಹಾಗೂ ಮಾನವ ಕಲ್ಯಾಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಸುವರ್ಣಗಿರಿ ಮಠದ ಶ್ರೀಗಳಿಗೆ ಮೊದಲ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್ ಅರ್ಪಿಸಲಾಗುತ್ತಿದೆ ಎಂದರು.
ಸಹ ಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕಿಷ್ಕಿಂದ ವಿಶ್ವವಿದ್ಯಾಲಯ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿದೆ. ಬಳ್ಳಾರಿಯಲ್ಲಿ ಈ ವರೆಗೆ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಪ್ಲೇಸ್‌ಮೆಂಟ್ ಆಗಿದೆ. ಪ್ರತಿವರ್ಷವೂ ವಿವಿಧ ಪ್ರಮುಖ ಕಂಪನಿಗಳಲ್ಲಿ ನಮ್ಮ ವಿದ್ಯಾರ್ಥಿಗಳು ಉದ್ಯೋಗಗಳನ್ನು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ಭಾಗದ ವಿದ್ಯಾರ್ಥಿಗಳು ದೂರದ ಊರುಗಳಿಗೆ ತೆರಳಿ ಉನ್ನತ ಶಿಕ್ಷಣಕ್ಕಾಗಿ ಪರದಾಡುವಂತಾಗಬಾರದು ಎಂಬ ಆಶಯದಿಂದ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಯಿತು. ಅಂತೆಯೇ ಕಿಷ್ಕಿಂದ ವಿವಿಯು ಅಸ್ವಿತ್ವ ಪಡೆಯಿತು. ನಾವು ಅಂದುಕೊಂಡಂತೆಯೇ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಾವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ. ವಿಶ್ವವಿದ್ಯಾಲಯ ಕೌಶಲ್ಯಾಧಾರಿತ ಶಿಕ್ಷಣ ಮತ್ತು ಮೌಲ್ಯಾಧಾರಿತ ಅಧ್ಯಯನಕ್ಕೆ ಆದ್ಯತೆ ನೀಡಿರುವುದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ನಮ್ಮ ವಿವಿಯ ವಿದ್ಯಾರ್ಥಿಗಳು ಹೊಂದಿದ್ದಾರೆ ಎಂದು ವಿವರಿಸಿದರು.ಟ್ರಸ್ಟ್‌ನ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್, ಅಮರ್‌ರಾಜ್ ಭೂಪಾಲ್, ಡಾ. ವಿ.ಜೆ. ಭರತ್ ಮೌಲ್ಯಮಾಪನ ಕುಲಸಚಿವ ಡಾ. ಯು. ಈರಣ್ಣ, ಡಾ. ರಾಜು ಜಾಡರ್ ಸುದ್ದಿಗೋಷ್ಠಿಯಲ್ಲಿದ್ದರು.