ಗದಗ: ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅದರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ರೈತರು, ವ್ಯಕ್ತಿಯ ಸ್ವಾತಂತ್ರ್ಯಹರಣ ಮಾಡಲು ಸಂವಿಧಾನ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಯಾವ ಇಲಾಖೆಯಲ್ಲಿಯೂ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಜನರು ಇದನ್ನು ವಿರೋಧ ಮಾಡಬಾರದು ಎಂದು ದ್ವೇಷ ಭಾಷಣದ ವಿರುದ್ಧ ಕಾನೂನು ಮಾಡಿದ್ದಾರೆ. ಕಾಂಗ್ರೆಸ್‌ನವರೇ ಹೆಚ್ಚು ದ್ವೇಷ ಭಾಷಣ ಮಾಡಿದ್ದಾರೆ. ಈಗಾಗಲೇ ದ್ವೇಷ ಭಾಷಣ ಮಾಡುವುದನ್ನು ನಿಯಂತ್ರಿಸಲು ಬಿಎನ್‌ಎಸ್ ಕಾನೂನಿದೆ. ವಿರೋಧ ಪಕ್ಷ, ರೈತರನ್ನು, ಜನಸಾಮಾನ್ಯರನ್ನು ದಮನ ಮಾಡಲು ಸಂವಿಧಾನದ ವಿರುದ್ಧ ಈ ಕಾನೂನು ತಂದಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿ ವಿಚಾರಧಾರೆ ಹತ್ತಿಕ್ಕಲು ಈ ವಿಧೇಯಕ ತರಲಾಗಿದೆ ಎಂಬ ಕಾಂಗ್ರೆಸ್‌ನವರ ಆರೋಪದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮನ ಹೆಸರು ತೆಗೆದುಕೊಂಡಾಗ ಅದರಲ್ಲಿ ಗಾಂಧೀಜಿ ಇದ್ದಾರೆ. ಗಾಂಧಿ ರಾಮರಾಜ್ಯ, ಗ್ರಾಮರಾಜ್ಯದ ಬಗ್ಗೆ ಮಾತನಾಡಿದ್ದಾರೆ. ರಾಮನನ್ನು ಗಾಂಧೀಜಿಯಿಂದ ಬೇರ್ಪಡಿಸುವುದೇ ಗಾಂಧೀಜಿಗೆ ಮಾಡುವ ದೊಡ್ಡ ಅಪಚಾರ ಎಂದರು.
ರೈತರಿಗೆ ಮೋಸ: ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಸಮರ್ಪಕವಾಗಿ ಆಗುತ್ತಿಲ್ಲ. 8- 10 ಕ್ವಿಂಟಲ್ ಖರೀದಿಸಿ ನಿಲ್ಲಿಸುತ್ತಿದ್ದಾರೆ. ಮೆಕ್ಕೆಜೋಳ ಬೆಳೆಯುವ ರೈತರಿಗೆ ಸರ್ಕಾರ ಮೋಸ ಮಾಡಿದೆ ಎಂದು ದೂರಿದರು.ಯಲವಿಗಿ- ಗದಗ ರೈಲ್ವೆ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ರೈಲ್ವೆ ಬೋರ್ಡ್‌ಗೆ ಒಪ್ಪಿಗೆಗೆ ಹೋಗುತ್ತದೆ. ರಾಜ್ಯ ಸರ್ಕಾರ ಅದನ್ನು ಕಳಿಸಬೇಕು. ಅಲ್ಲಿಂದ ಒಪ್ಪಿಗೆ ಬಂದ ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತದೆ. ಶೇ. 80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದ ಮೇಲೆ ಕಾರ್ಯಾರಂಭ ಆಗಲಿದೆ ಎಂದರು.