ಹನುಮನಾಳದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣ

KannadaprabhaNewsNetwork | Published : Feb 19, 2025 12:46 AM

ಸಾರಾಂಶ

ಹಲವು ವರ್ಷಗಳಿಂದ ಗ್ರಾಮದ ಹೊರವಲಯದಿಂದ ಹನುಮನಾಳಕ್ಕೆ ಸರಬರಾಜು ಆಗುತ್ತಿದ್ದ ಬೋರ್‌ವೆಲ್‌ ನೀರು ಬೇಸಿಗೆಯಿಂದ ಅಂತರ್ಜಲ ಕುಸಿತವಾಗಿದೆ. ಇದರಿಂದ ಸಕಾಲಕ್ಕೆ ನೀರು ಪೂರೈಸಲು ಸಾಧ್ಯವಾಗಿದೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.

ಕನಕಗಿರಿ:

ತಾಲೂಕಿನ ಹುಲಿಹೈದರ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಗ್ರಾಪಂ ಆಡಳಿತ ಮಂಡಳಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಮುಂದಾಗಿದೆ. ಆದರೆ, ಗ್ರಾಮದಲ್ಲಿ ಮಂಗಳವಾರ ಜಾತ್ರೆ ಇದ್ದ ಕಾರಣಕ್ಕೆ ಈ ನೀರು ಸಾಕಾಗುವುದಿಲ್ಲ ಎಂದು ದೇಣಿಗೆ ಸಂಗ್ರಹಿಸಿ ಟ್ಯಾಂಕರ್‌ ನೀರು ತರಿಸಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಗ್ರಾಮದ ಹೊರವಲಯದಿಂದ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಬೋರ್‌ವೆಲ್‌ ನೀರು ಬೇಸಿಗೆಯಿಂದ ಅಂತರ್ಜಲ ಕುಸಿತವಾಗಿದೆ. ಇದರಿಂದ ಸಕಾಲಕ್ಕೆ ನೀರು ಪೂರೈಸಲು ಸಾಧ್ಯವಾಗಿದೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಜನರಿಗೆ ಕುಡಿಯಲು ಬೇಕಾಗುವ ನೀರನ್ನು ಗ್ರಾಮ ಪಂಚಾಯಿತಿ ಪೂರೈಸಿದೆ. ಆದರೆ, ಗ್ರಾಮದಲ್ಲಿ ಮಂಗಳವಾರ ನಡೆದ ಉಡಚಲಮ್ಮದೇವಿಯ ಜಾತ್ರೆ ಬರುವ ಭಕ್ತರಿಗೆ ಬೇಕಾಗುವಷ್ಟು ನೀರು ಪೂರೈಸಲು ಗ್ರಾಮ ಪಂಚಾಯಿತಿಗೆ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರಿಗೆ ನೀರಿನ ಸಮಸ್ಯೆ ಆಗಬಾರದು ಎಂದು ಗ್ರಾಮಸ್ಥರು ₹ ೧೦೦, ₹ ೨೦೦ ದೇಣಿಗೆ ಸಂಗ್ರಹಿಸಿ ಟ್ಯಾಂಕರ್‌ ನೀರು ತರಿಸಿಕೊಂಡಿದ್ದಾರೆ.

ಗ್ರಾಮಸ್ಥ ಯಮನೂರಪ್ಪ ನಾಯಕ ಮಾತನಾಡಿ, ವಾರದಿಂದ ಹನುಮನಾಳ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಗ್ರಾಪಂನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಜಾತ್ರೆ ಇರುವುದರಿಂದ ಜಾತ್ರೆಗೆ ಬಂದ ಭಕ್ತರಿಗೆ ನೀರಿನ ತೊಂದರೆಯಾಗಿದೆ. ಇದರಿಂದ ಗ್ರಾಮದ ನಾಲ್ಕೈದು ಕುಟುಂಬಸ್ಥರು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ದುಡ್ಡು ಕೊಟ್ಟು ಟ್ಯಾಂಕರ್ ತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಹನುಮನಾಳದ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕುಸಿದಿದ್ದರಿಂದ ನೀರು ಸರಬರಾಜಿಗೆ ತೊಂದರೆಯಾಗಿದೆ. ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ಬೋರ್‌ವೆಲ್ ಕೊರೆಯಿಸಿ ನೀರಿನ ಸಮಸ್ಯೆ ನೀಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪಿಡಿಒ ಅಮರೇಶ ರಾಠೋಡ ಹೇಳಿದರು.

Share this article