ತಾಲೂಕಿನ ಹಲವು ಶಾಲಾ- ಕಾಲೇಜುಗಳಲ್ಲಿ ಇರುವ ಶೌಚಾಲಯ ಕಾಮಗಾರಿಗಳು ಅಪೂರ್ಣಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಬಿಡುಗಡೆಗೊಂಡ ಅನುದಾನ ಪೋಲಾಗದಂತೆ ಕ್ರಮ ಕೈಗೊಳ್ಳಬೇಕು.
ಲಕ್ಷ್ಮೇಶ್ವರ: ಸರ್ಕಾರಿ ಕಾಮಗಾರಿಗಳಿಗೆ ಸಾರ್ವಜನಿಕರು ವಿನಾಕಾರಣ ಅಡ್ಡಿಪಡಿಸಿದರೆ ಅವರ ಮೇಲೆ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.
ಗುರುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮುಕ್ತಾಯಗೊಳ್ಳಬೇಕಾದ ಕಾಮಗಾರಿಗಳನ್ನು ಅಧಿಕಾರಿಗಳು ಶೀಘ್ರದಲ್ಲಿ ಪೂರ್ಣವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಕ್ಷೇತ್ರಕ್ಕೆ ಬಂದ ಅನುದಾನ ಮರಳಿ ಹೋಗದಂತೆ ಕಾರ್ಯ ನಿರ್ವಹಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.ಅಧಿಕಾರಿಗಳು ಒಂದು ಇಲಾಖೆಗೆ ಸಂಬಂಧಿಸಿದಂತೆ ಕಾಮಗಾರಿಗಳು ನಡೆಯುತ್ತಿರುವಾಗ ಸಂಬಂಧಪಡುವ ಇನ್ನೊಂದು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ಕಾರದ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತವೆ ಎಂದರು.
ತಾಲೂಕಿನ ಹಲವು ಶಾಲಾ- ಕಾಲೇಜುಗಳಲ್ಲಿ ಇರುವ ಶೌಚಾಲಯ ಕಾಮಗಾರಿಗಳು ಅಪೂರ್ಣಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಬಿಡುಗಡೆಗೊಂಡ ಅನುದಾನ ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಡಿಯಲ್ಲಿನ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲದೆ ಚಿಕ್ಕಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಕುಡಿಯುವ ನೀರು ಸೌಲಭ್ಯ ಒದಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದ ಅವರು, ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತವೆ. ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಜಾಗದ ಕೊರತೆ, ಇದು ಇಲಾಖೆಗೆ ತಲೆನೋವಿನ ಸಂಗತಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನೋಡಲ್ ಅಧಿಕಾರಿ ಎಂ.ವಿ. ಚಳಗೇರಿ ಅಧಿಕಾರಿಗಳು ಸಭೆಗೆ ಬರುವಾಗ ಸರಿಯಾದ ಮಾಹಿತಿ ತೆಗೆದುಕೊಂಡು ಬರಬೇಕು. ಇಲ್ಲವಾದಲ್ಲಿ ಸಭೆಗೆ ನೀಡುವ ಮಾಹಿತಿಗಳು ಅಪೂರ್ಣವಾಗುತ್ತವೆ ಎಂದರು.
ತಾಪಂ ಇಒ ಕೃಷ್ಣಪ್ಪ ಧರ್ಮರ ಇದ್ದರು. ಸಭೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಹೆಸ್ಕಾಂ, ಅಲ್ಪಸಂಖ್ಯಾತರ ಇಲಾಖೆ, ನಿರ್ಮಿತಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.