- ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ವಿಶಿಷ್ಟ ಅಂಗವಿಕಲರು, ಬುದ್ಧಿಮಾಂದ್ಯರ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ ದಾವಣಗೆರೆ ವಿಶೇಷಚೇತನರು, ಹಿರಿಯ ನಾಗರೀಕರು, ವಿಧವೆಯರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಸರ್ಕಾರದ ಮಾಸಾಶನ (ಪಿಂಚಣಿ)ಕ್ಕೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ವಿಶಿಷ್ಟ ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಸಂಘದ ನೇತೃತ್ವದಲ್ಲಿ ಫಲಾನುಭವಿಗಳು ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟಿಸಿದರು.
ನಗರದ ಡಿಸಿ ಕಚೇರಿ ಎದುರು ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿದ ಪಿಂಚಣಿದಾರರು, ಫಲಾನುಭವಿಗಳು ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿ, ಮಾಸಾಶನಕ್ಕೆ ಆದಾಯ ಮಿತಿಯನ್ನು ₹32 ಸಾವಿರಗಳಿಗೆ ನಿಗದಿಪಡಿಸಿದ್ದನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.ಸಂಘದ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ವಿಕಲಚೇತನರು, ವಿಧವೆಯರು, ಕಿವಿ ಮತ್ತು ಮೂಗರು, ಹಿರಿಯ ನಾಗರೀಕರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡುತ್ತಿದೆ. ಈವರೆಗೆ ಯಾವುದೇ ಆದಾಯ ಮಿತಿಯಿಲ್ಲದೇ ಮಾಸಾಶನ ನೀಡಲಾಗುತ್ತಿತ್ತು. ಆದರೆ, ಈಗ ಏಕಾಏಕಿ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರಕ್ಕೆ ನಿಗದಿಪಡಿಸಿದ್ದು ನ್ಯಾಯಸಮ್ಮತವಲ್ಲ ಎಂದು ಆಕ್ಷೇಪಿಸಿದರು.
2016ರ ವಿಕಲಚೇತನರ ಹಕ್ಕುಗಳ ಕಾಯ್ದೆ (ಆರ್‌ಪಿಡಬ್ಲ್ಯೂಡಿ ಆಕ್ಟ್) ಸೆಕ್ಷನ್ 24, 2007ರ ಹಿರಿಯ ನಾಗರೀಕ ಕಲ್ಯಾಣ ಕಾಯ್ದೆ ಸೆಕ್ಷನ್ 19-20೦, ಹಾಗೂ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್‌ಎಸ್‌ಎಪಿ)ದ ನಿಯಮಗಳ ಪ್ರಕಾರ ಅಶಕ್ತರಿಗೆ ಗೌರವಯುತ ಮಾಸಾಶನ ನೀಡುವುದು ಸರ್ಕಾರದ ಜವಾಬ್ದಾರಿ. ಮಾಸಾಶನ ಸರ್ಕಾರ ನೀಡುವ ಭಿಕ್ಷೆಯಲ್ಲ. ನಮಗಾಗಿ ನಾವು-ನಮ್ಮಿಂದಲೇ ನಾವು'''''''', ಸಾಮಾಜಿಕ ಭದ್ರತೆಯು ನಮ್ಮ ಸಂವಿಧಾನಾತ್ಮಕ ಹಕ್ಕು ಹಾಗೂ ಪಿಂಚಣಿಯೇ ನಮ್ಮ ಬದುಕು ಎಂದು ಪ್ರತಿಭಟನಾಕಾರರು ತಮ್ಮ ಹಕ್ಕು ಎಂದು ಅವರು ಹೇಳಿದರು.
ಸಾಮಾಜಿಕ ಭದ್ರತಾ ಪಿಂಚಣಿದಾರರಿಗೆ ಹೇರಿರುವ ₹32 ಸಾವಿರಗಳ ಆದಾಯ ಮಿತಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ತಡೆಹಿಡಿದ ಪಿಂಚಣಿ ತಕ್ಷಣ ಬಿಡುಗಡೆ ಮಾಡಬೇಕು. ವಿಕಲಚೇತನರಿಗೆ ನೀಡುವ ಮಾಶಾಸನ ₹5 ಸಾವಿರಕ್ಕೆ ಹೆಚ್ಚಿಸಬೇಕು. ಸರ್ಕಾರಿ- ಖಾಸಗಿ ಉದ್ಯೋಗಗಳ ನೇಮಕಾತಿಯಲ್ಲಿ ವಿಕಲಚೇತನರ ಮೀಸಲಾತಿಯಲ್ಲಿ ಎಲ್ಲ ವಿಧದ ವಿಕಲಚೇತನರಿಗೂ ಸಮಾನ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಗಫರ್, ಮಂಜುಳಮ್ಮ, ಸೈಯದ್ ಕೌಶಿಕ್, ಆದಿಲ್ ಬಾಷಾ, ಡಾ.ಮಹಾಬಲೇಶ್ವರ, ಮಂಜಪ್ಪ, ಮಹಾಂತೇಶ ಸೇರಿದಂತೆ ವಿಕಲಚೇತನರು, ಮೂಗರು ಸೇರಿದಂತೆ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿದ್ದರು.
-20ಕೆಡಿವಿಜಿ5: ಸಾಮಾಜಿಕ ಭದ್ರತಾ ಯೋಜನೆಗಳಡಿ ಸರ್ಕಾರದ ಮಾಸಾಶನಕ್ಕೆ ವಾರ್ಷಿಕ ಆದಾಯ ಮಿತಿ ನಿಗದಿ ಖಂಡಿಸಿ ವಿಶಿಷ್ಟ ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಸಂಘದ ನೇತೃತ್ವದಲ್ಲಿ ಫಲಾನುಭವಿಗಳು ದಾವಣಗೆರೆ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.