ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯನ್ನು ಬರಗಾಲ ವ್ಯಾಪಕವಾಗಿ ಕಾಡುತ್ತಿದ್ದು, ಅದರಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಬೇಸಿಗೆಯಿಂದಲೇ ಚಾಲನೆಯಲ್ಲಿದ್ದು, ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಜನರು ಹನಿ ನೀರಿಗೂ ಮಳೆಗಾಲದಲ್ಲಿಯೇ ಪರದಾಡುವಂತಾಗಿದೆ.

ಪ್ರಸ್ತುತ ಜಿಲ್ಲೆಯ 39 ಗ್ರಾಪಂಗಳ ವ್ಯಾಪ್ತಿಯ 58 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದರೆ ವಾಸ್ತವದಲ್ಲಿ ಮಲಪ್ರಭಾ ಮತ್ತು ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಸಮಗ್ರ ಜಿಲ್ಲೆಯೇ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿದೆ.

ಗ್ರಾಮಗಳ ವಿವರ: ಗದಗ ತಾಲೂಕಿನ 8 ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ, ಕೋಟುಮಚಗಿ, ಗಾವರವಾಡ, ಕದಡಿ, ಬಳಗಾನೂರ, ಹುಯಿಲಗೋಳ, ಕಿರಟಗೇರಿ, ಹೊಂಬಳ, ಚಿಂಚಲಿ, ಮಹಾಲಿಂಗಪುರ, ಹಂಗಮನಕಟ್ಟಿ ಮತ್ತು ಸೊರಟೂರ ಗ್ರಾಮಗಳು ಸೇರಿದಂತೆ ಒಟ್ಟು 12 ಗ್ರಾಮಗಳಲ್ಲಿ, ಮುಂಡರಗಿ ತಾಲೂಕಿನ 6 ಗ್ರಾಪಂ ವ್ಯಾಪ್ತಿಯ ಗುಡ್ಡದಬೂದಿಹಾಳ, ಚಿಕ್ಕವಡ್ಡಟ್ಟಿ, ಹೈತಾಪೂರ, ಹಳ್ಳಿಕೇರಿ, ಬೆಣ್ಣಿಹಳ್ಳಿ, ಯಕ್ಲಾಸಪೂರ, ಬೂದಿಹಾಳ, ಬಿದರಳ್ಳಿ ಸೇರಿದಂತೆ ಒಟ್ಟು 8 ಗ್ರಾಮಗಳ ಜನರು ತೊಂದರೆ ಅನುಭವಿಸಲಿದ್ದಾರೆ.

ನರಗುಂದ ತಾಲೂಕಿನ 4 ಗ್ರಾಪಂ ವ್ಯಾಪ್ತಿಯಲ್ಲಿನ ಮೂಗನೂರ, ಹದ್ಲಿ, ಕೊಣ್ಣೂರ, ಕುರ್ಲಗೇರಿ, ಬನಹಟ್ಟಿ ಹಾಗೂ ಭೈರನಹಟ್ಟಿ ಗ್ರಾಮಗಳು ಸೇರಿದಂತೆ ಒಟ್ಟು 6 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ ಎಂದು ಅಂದಾಜಿಸಲಾಗಿದೆ. ಗಜೇಂದ್ರಗಡ ತಾಲೂಕಿನ 3 ಗ್ರಾಮಗಳ ವ್ಯಾಪ್ತಿಯಲ್ಲಿನ 4 ಗ್ರಾಮಗಳಾದ ಮಾಟರಂಗಿ, ಪುರ್ತಗೇರಿ, ಹಿರೇಕೊಪ್ಪ, ನಾಗೇಂದ್ರಗಡ ಸಮಸ್ಯೆ ಸೃಷ್ಟಿಯಾಗಲಿದೆ.


ರೋಣ ತಾಲೂಕಿನ 5 ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳಾದ ಹೊಳೆಮಣ್ಣೂರು, ಮೆಣಸಗಿ, ಗಾಡಗೋಳಿ, ಭೋಪಳಾಪುರ, ಬಿ.ಎಸ್. ಬೇಲೇರಿ, ಬಸರಕೋಡ, ಮಾಳವಾಡ ಹಾಗೂ ಬಾಸಲಾಪುರಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಶಿರಹಟ್ಟಿ ತಾಲೂಕಿನ 6 ಗ್ರಾಪಂ ವ್ಯಾಪ್ತಿಯಲ್ಲಿನ 10 ಗ್ರಾಮಗಳಾದ ಜೆಲ್ಲಿಗೇರಿ, ವರವಿ, ಜಲ್ಲಿಗೇರಿ ತಾಂಡಾ, ಚೌಡಾಳ, ನವೆಭಾವನೂರ, ಮಾಚೇನಹಳ್ಳಿ, ಕುಸಲಾಪುರ, ಶಿವಾಜಿನಗರ, ಮಾಗಡಿ, ಚನ್ನಪಟ್ಟಣ ಗ್ರಾಮಗಳಿಗೆ ಸಮಸ್ಯೆ ಎದುರಾಗಲಿದೆ. ಲಕ್ಷ್ಮೇಶ್ವರ ತಾಲೂಕಿನ 7 ಗ್ರಾಪಂ ವ್ಯಾಪ್ತಿಯಲ್ಲಿನ 10 ಗ್ರಾಮಗಳಾದ ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ಗೊಜನೂರು, ಅಕ್ಕಿಗುಂದ, ಅಕ್ಕಿಗುಂದ ತಾಂಡಾ, ಪುಟಗಾಂ ಬಡ್ನಿ, ಆದ್ರಳ್ಳಿ, ಯಲ್ಲಾಪುರ, ಬಾಲೆಹೊಸೂರು ಗ್ರಾಮಗಳ ಜನರು ಸಮಸ್ಯೆ ಎದುರಿಸುವುದು ಅನಿವಾರ್ಯ.ಸಮಸ್ಯೆ ಮತ್ತಷ್ಟು ಉಲ್ಬಣ: ಜಿಲ್ಲೆಯಲ್ಲಿರುವ ಒಟ್ಟು 122 ಗ್ರಾಪಂಗಳ ವ್ಯಾಪ್ತಿಯಲ್ಲಿ ಒಟ್ಟು 337 ಗ್ರಾಮಗಳಿವೆ. ಇವುಗಳಲ್ಲಿ 39 ಗ್ರಾಪಂಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ಬರ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ 58 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದರೆ ವಾಸ್ತವದಲ್ಲಿ ಜಿಲ್ಲೆಯ ಇನ್ನು 65ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ. ದೀಪದ ಕೆಳಗೆ ಕತ್ತಲು: ಬರ ಸಂಕಟ ಹೀಗೆಯೇ ಮುಂದುವರಿದಲ್ಲಿ ಜಿಲ್ಲೆಯ 58 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ. ಅದರಲ್ಲಿಯೂ ಗದಗ ತಾಲೂಕಿನಲ್ಲಿಯೇ ಅತಿ ಹೆಚ್ಚು 12 ಗ್ರಾಮಗಳು ಬಾಧಿತವಾಗುತ್ತಿದ್ದರೆ, ಗಜೇಂದ್ರಗಡ ತಾಲೂಕಿನಲ್ಲಿ ಕೇವಲ 4 ಗ್ರಾಮಗಳು ಮಾತ್ರ ಕುಡಿಯುವ ನೀರಿನ ಸಮಸ್ಯೆ ತುತ್ತಾಗಲಿದ್ದು, ಜಿಲ್ಲಾ ಕೇಂದ್ರವಾದ ಗದಗ ತಾಲೂಕಿನಲ್ಲಿಯೇ ಸಮಸ್ಯೆ ತೀವ್ರವಾಗಿದ್ದು, ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ.

ಹಣ ಲೂಟಿ: ಜಿಲ್ಲಾಡಳಿತ ಕೇವಲ ಸಮಸ್ಯೆ ಸೃಷ್ಟಿಯಾಗುವ ಗ್ರಾಮಗಳ ಪಟ್ಟಿ ತಯಾರಿಸಿ ಕುಳಿತರೆ ಸಾಲದು. ಈಗಿನಿಂದಲೇ ಆಯಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಗಮನ ನೀಡಬೇಕು. ನಂತರ ನಾವು ಟ್ಯಾಂಕರ್ ಮೂಲಕ ನೀರು ಕೊಡುತ್ತೇವೆ ಎನ್ನುವ ಮೂಲಕ ಹಣ ಲೂಟಿಗೆ ಇಳಿಯುತ್ತಾರೆ. ಇದನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.