ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಜಾಸೇವಾ’ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದೇ ದಿನ ಸಾರ್ವಜನಿಕರಿಂದ 26,387 ಕುಂದುಕೊರತೆ ಅರ್ಜಿಗಳು ನೋಂದಣಿಯಾಗಿದ್ದು, ಇದರಲ್ಲಿ 13,872 (ಶೇ.52) ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಜಾಸೇವಾ’ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದೇ ದಿನ ಸಾರ್ವಜನಿಕರಿಂದ 26,387 ಕುಂದುಕೊರತೆ ಅರ್ಜಿಗಳು ನೋಂದಣಿಯಾಗಿದ್ದು, ಇದರಲ್ಲಿ 13,872 (ಶೇ.52) ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ. ಉಳಿದ 12,514 ಕುಂದುಕೊರತೆ ಪರಿಶೀಲಿಸಲಾಗುತ್ತಿದ್ದು ಕಾನೂನಾತ್ಮಕವಾಗಿ ಪರಿಹಾರ ನೀಡಲಾಗುತ್ತದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದರು.
ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಜಾಸೇವಾ ಅಭಿಯಾನ ಕಾರ್ಯಕ್ರಮ ಮತ್ತು ಪ್ರಜಾಸೇವಾ ಇಲಾಖೆಯ ರಚನೆ, ಸ್ವರೂಪ ಹಾಗೂ ಕಾರ್ಯವೖಖರಿ ಕುರಿತು ವಿವರವಾದ ಮಾಹಿತಿ ನೀಡಿದರು.
ಪ್ರಜಾಸೇವೆ ಇಲಾಖೆ ಮೂಲಕ ರಾಜ್ಯದಲ್ಲಿ ಸಾರ್ವಜನಿಕ ಕುಂದು-ಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಆಡಳಿತದಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ. ಇದೇ ಸೆ.5 ರಂದು ಮುಖ್ಯಮಂತ್ರಿ ಅವರು ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಒಂದೇ ದಿನ 26,387 ಅರ್ಜಿಗಳು ಬಂದಿದ್ದವು. 13,872 ಅರ್ಜಿಗಳನ್ನು ಪರಿಹರಿಸಲಾಗಿದೆ. ಉಳಿದವು ಪರಿಶೀಲನಾ ಹಂತದಲ್ಲಿವೆ ಎಂದರು.
ಕಂದಾಯ ಇಲಾಖೆಯಿಂದ ಅತಿ ಹೆಚ್ಚು 9,260 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಹೆಚ್ಚು ವೃದ್ಧಾಪ್ಯವೇತನಗಳಿಗೆ ಸಂಬಂಧಿಸಿದವು. ಇತ್ತೀಚೆಗೆ ಪಿಂಚಣಿಯಲ್ಲಿ ಅನರ್ಹರನ್ನು ಪರಿಷ್ಕರಣೆ ಮಾಡಲಾಗುತ್ತಿರುವುದರಿಂದ ಈ ವಿಚಾರದಲ್ಲಿ ಹೆಚ್ಚಿನ ಮನವಿ ಬಂದಿವೆ. ಹಾಗೆಯೇ ಪಡಿತರ ಚೀಟಿಗೆ ಸದಸ್ಯರನ್ನು ಸೇರಿಸುವ ವಿಚಾರದಲ್ಲೂ ಹೆಚ್ಚಿನ ಮನವಿಗಳು ಬಂದಿವೆ ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಇಲಾಖೆಯ ಆಡಳಿತ ಸುಧಾರಣೆ ವಿಭಾಗ, ಸಕಾಲ ಮಿಷನ್, ಮತ್ತು ಸಾರ್ವಜನಿಕ ಕುಂದು-ಕೊರತೆಗಳ ಪರಿಹಾರ ವಿಭಾಗಗಳನ್ನು ಈ ನೂತನ ''ಪ್ರಜಾಸೇವೆ'' ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ. ‘ಇ-ಆಫೀಸ್’ ಮತ್ತು ನ್ಯಾಯಾಲಯದ ಪ್ರಕರಣಗಳ ಉಸ್ತುವಾರಿಗಾಗಿ ಇರುವ ‘ಸಿಸಿಎಂಎಸ್’ ವ್ಯವಸ್ಥೆಯನ್ನು ಈ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ 898 ಸೇವೆಗಳಿವೆ. ಇದಲ್ಲದೆ ವಿವಿಧ ಇಲಾಖೆಗಳಿಂದ ಇನ್ನು ಸುಮಾರು 2,456 ಸೇವೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 2,300 ಸೇವೆಗಳು ಈಗಾಗಲೇ ಆನ್‌ಲೈನ್ ಇದ್ದು, ಉಳಿದ 156 ಸೇವೆಗಳನ್ನು ಆನ್‌ಲೈನ್ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರದ ಈ ಎಲ್ಲಾ ಸೇವೆಗಳನ್ನು ‘ಸಕಾಲ’ ಯೋಜನೆಯಡಿ ತರುವ ಗುರಿ ಹೊಂದಲಾಗಿದೆ ಎಂದರು.
ಅ.2ಕ್ಕೆ ನಮ್ಮ ಸೇವಾ ಆ್ಯಪ್ ಬಿಡುಗಡೆ
ಪ್ರಜಾಸೇವಾ ಅಭಿಯಾನಕ್ಕೆ ನಮ್ಮ ಸೇವಾ ಎಂಬ ಮೊಬೈಲ್ ಆ್ಯಪ್ ಮೂಲಕ ಹೊಸ ಸ್ಪರ್ಶ ನೀಡಲು ಸಿದ್ಧತೆ ನಡೆದಿದೆ. ನಾಗರಿಕರು ತಮ್ಮ ಮೊಬೈಲ್‌ನಲ್ಲೇ ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಹಣರಹಿತ, ಕಾಗದರಹಿತ ಮತ್ತು ಸಂಪರ್ಕರಹಿತವಾಗಿ ಪಡೆಯಲು ಅ.2 ರಂದು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಅಷ್ಟೇ ಅಲ್ಲ, ನಾಗರಿಕರು ತಮ್ಮ ದೂರುಗಳನ್ನು ಸರಳವಾಗಿ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಲ್ಲಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು. ಸಾರ್ವಜನಿಕರು ನೀಡುವ ಆಡಿಯೋ ಅಥವಾ ಪಠ್ಯ ಸಂದೇಶದ ಸ್ಥಳ ಆಧರಿಸಿ, ಎಐ ತಂತ್ರಜ್ಞಾನ ವ್ಯವಸ್ಥೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ನೇರವಾಗಿ ದೂರು ತಲುಪಿಸಲಿದೆ. ಒಟ್ಟಿನಲ್ಲಿ ಜನಸೇವಾ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ಸಲ್ಲಿಸುವ ಕುಂದು-ಕೊರತೆ ಅರ್ಜಿಗಳನ್ನು ತ್ವರಿತವಾಗಿ ವರ್ಗೀಕರಣ ಮಾಡಲು ಹಾಗೂ ಪಿಡಿಎಫ್ ದಾಖಲೆಗಳನ್ನು ಓದಿ, ಸರಿಯಾದ ವಿಭಾಗಕ್ಕೆ ವರ್ಗಾಯಿಸಲು ‘ಎಐ’ ಸಾಫ್ಟ್‌ವೇರ್ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ಪ್ರತಿ ಶನಿವಾರ ಜನಸ್ಪಂದನಾ ಸಭೆ ಕಡ್ಡಾಯ:
ಪ್ರತಿ ಶನಿವಾರ ಜನಸ್ಪಂದನಾ ಸಭೆಗಳನ್ನು ನಡೆಸುವುದು ಕಡ್ಡಾಯ. 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ 2ನೇ ಮತ್ತು 4ನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯಲಿವೆ.
ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನು ಆನ್‌ಲೈನ್ ಸಿಸ್ಟಮ್‌ನಲ್ಲಿ ಕಡ್ಡಾಯವಾಗಿ ನಮೂದಿಸಿ, ಸ್ವೀಕೃತಿ ನೀಡಲಾಗುತ್ತಿದೆ. ಸಭೆಯಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಬುಧವಾರ ಬೆಳಗ್ಗೆ 9 ರಿಂದ 11 ಗಂಟೆಗೆ ತಹಸೀಲ್ದಾರ್ ಮತ್ತು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಂದ, ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಹಾಯಕ ಆಯುಕ್ತರಿಂದ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾಧಿಕಾರಿಗಳಿಂದ ನಡೆಯುವ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ತಮ್ಮ ದೂರಿನ ಇತ್ಯರ್ಥ ಪರಿಶೀಲಿಸಬಹುದು. ಈ ಮೂರು ಹಂತದ ಪರಿಶೀಲನಾ ಸಭೆಯಲ್ಲೂ ತಮ್ಮ ದೂರಿಗೆ ದೊರೆತ ಇತ್ಯರ್ಥದಿಂದ ತೃಪ್ತರಾಗದವರು ಖುದ್ದು ಹಾಜರಾಗಿ ತಮ್ಮ ಅಹವಾಲು ಮಂಡಿಸಬಹುದು. ಆಗ ಇಲಾಖಾ ಅಧಿಕಾರಿ ಸಮ್ಮುಖದಲ್ಲಿಯೇ ಅವರ ದೂರು ಇತ್ಯರ್ಥಗೊಳಿಸಲಾಗುವುದೆಂದು ವಿವರಿಸಿದರು.
ದೂರುಗಳ ಪರಿಶೀಲನೆಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ
ದೂರು ವಿಚಾರದಲ್ಲಿ ಎರಡು ಸರತಿ (ಕ್ಯೂ) ಸಾಲಿನ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಬಾರಿಗೆ ದೂರು ನೀಡುವವರಿಗೆ ಮತ್ತು ಈಗಾಗಲೇ ದೂರು ನೀಡಿ ಪರಿಹಾರ ಸಿಗದವರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಲಾಗಿನ್‌ಗೆ ವಿಶೇಷ ಅಧಿಕಾರ ನೀಡಲಾಗಿದ್ದು, 21 ದಿನಗಳಾದರೂ ದೂರು ಇತ್ಯರ್ಥವಾಗದಿದ್ದಲ್ಲಿ, ಅವರ ಲಾಗಿನ್ ಮೂಲಕ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಮರುಪರಿಶೀಲನೆಗೆ ಕಳುಹಿಸಬಹುದು ಅಥವಾ ಅಂತಿಮವಾಗಿ ಕ್ಲೋಸ್ ಮಾಡಬಹುದು. ಪ್ರಸ್ತುತ ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಭ್ಯವಿರುವ 898 ಸೇವೆಗಳ ಜೊತೆಗೆ, ಈಗಾಗಲೇ ಗುರುತಿಸಲಾಗಿರುವ ಒಟ್ಟು 2,456 ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರಲು ನಿರ್ಧರಿಸಲಾಗಿದೆ. ನಾಗರಿಕರಿಗೆ ಸಿಂಗಲ್ ಸೈನ್-ಆನ್ ಮೂಲಕ ಎಲ್ಲಾ ಸರ್ಕಾರಿ ಸೇವೆಗಳನ್ನು ಪಡೆಯಲು ಒಂದೇ ಬಾರಿಯ ಲಾಗಿನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಾಗೆಯೇ ಯೋಜನೆಗಳ ಹುಡುಕಾಟ ಮತ್ತು ಅರ್ಜಿ ಪ್ರಕ್ರಿಯೆ ಸುಲಭಗೊಳಿಸಲು ಎಐ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಸಾರ್ವಜನಿಕರು ಧ್ವನಿ ಅಥವಾ ಬರಹ ಮೂಲಕ ತಮ್ಮಗೆ ಬೇಕಾಗಿರವ ಯೋಜನೆಗಳನ್ನು ತಿಳಿದುಕೊಳ್ಳಬಹುದು.
ದಾಖಲೆಗಳನ್ನು ಪದೇ ಪದೆ ಅಪ್‌ಲೋಡ್ ಮಾಡುವುದನ್ನು ತಪ್ಪಿಸಲು ಡಿಜಿ ಲಾಕರ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ನೀಡಲಾಗುವ ಪ್ರಮಾಣಪತ್ರಗಳಿಗೆ ನೈಜತೆ ಪರಿಶೀಲನೆಗಾಗಿ ‘ಕ್ಯುಆರ್ ಕೋಟ್’ ನೀಡಲಾಗುವುದೆಂದರು.
