ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ‘ಡಿಜಿಟಲ್‌ ಅಂಕಪಟ್ಟಿ’ ಮಾತ್ರವಲ್ಲ, ಈ ಹಿಂದೆ ಇದ್ದಂತೆ ‘ಭೌತಿಕ ಅಂಕಪಟ್ಟಿ’ಯೂ ಸಿಗಲಿದೆ

ಲಿಂಗರಾಜು ಕೋರಾ

 ಬೆಂಗಳೂರು : ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ‘ಡಿಜಿಟಲ್‌ ಅಂಕಪಟ್ಟಿ’ ಮಾತ್ರವಲ್ಲ, ಈ ಹಿಂದೆ ಇದ್ದಂತೆ ‘ಭೌತಿಕ ಅಂಕಪಟ್ಟಿ’ಯೂ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದಂತಾಗಿದೆ.

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ವಿವಿಧ ವಿವಿಗಳ ಕುಲಪತಿಗಳು ಹಾಗೂ ಅಧಿಕಾರಿಗಳ ಸಲಹೆ ಪಡೆದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಭೌತಿಕ ಅಂಕಪಟ್ಟಿ ನೀಡುವುದನ್ನು ಪುನಾರಂಭಿಸಲು ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ತಗಲುವ ವೆಚ್ಚ, ಅಂಕಪಟ್ಟಿ ನಕಲು ಮಾಡದಂತೆ ತಡೆಯಲು ಯಾವೆಲ್ಲಾ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಬೇಕು(ಸೆಕ್ಯುರಿಟಿ ಫೀಚರ್ಸ್‌) ಎಂಬ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಮುಂದಿನ ಒಂದು ವಾರದೊಳಗೆ ವರದಿ ನೀಡಲು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ.

ನಕಲಿ ಅಂಕಪಟ್ಟಿ ಹಾವಳಿ ತಡೆ, ವಿಶ್ವವಿದ್ಯಾಲಯಗಳಿಗೆ ಆರ್ಥಿಕ ಹೊರೆ ತಪ್ಪಿಸುವುದು ಮತ್ತು ಪರಿಸರ ಸ್ನೇಹಿ ಅಥವಾ ಕಾಗದರಹಿತ ಕ್ರಮಕ್ಕಾಗಿ ಕೆಲವು ವರ್ಷಗಳಿಂದ ಭೌತಿಕ ಅಂಕಪಟ್ಟಿಗಳನ್ನು ನೀಡುವುದನ್ನು ಸರ್ಕಾರದ ಸೂಚನೆಯಂತೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ನಿಲ್ಲಿಸಲಾಗಿದೆ. ಡಿಜಿಲಾಕರ್‌ನಲ್ಲಿ ಅಪ್‌ಲೋಡ್‌ ಮಾಡುವ ಡಿಜಿಟಲ್‌ ಅಂಕಪಟ್ಟಿಯನ್ನು ವಿದ್ಯಾರ್ಥಿಗಳು ಬೇಕಿದ್ದರೆ ಡೌನ್‌ಲೋಡ್‌ ಮಾಡಲು ಅವಕಾಶ ನೀಡಲಾಗಿತ್ತು.

ಆದರೆ, ಇದಕ್ಕೆ ವಿದ್ಯಾರ್ಥಿಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಡಿಜಿಟಲ್‌ ಅಂಕಪಟ್ಟಿಯ ಜೊತೆಗೆ ಭೌತಿಕ ಅಥವಾ ಮುದ್ರಿತ ಅಂಕಟ್ಟಿಯನ್ನೂ ನೀಡಬೇಕೆಂಬ ಬೇಡಿಕೆ ಇದ್ದೇ ಇತ್ತು. ಇದಕ್ಕಾಗಿ ಭೌತಿಕ ಅಂಕಪಟ್ಟಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನೀಡಲು ಕೆಲವು ವಿವಿಗಳು ತೀರ್ಮಾನಿಸಿದ್ದವು. ಓದು ಮುಗಿಸಿ ಕೆಲಸಕ್ಕೆ ಸೇರಿದಾಗ ಕಂಪನಿಗಳಲ್ಲಿ ಡಿಜಿಟಲ್‌ ಅಂಕಪಟ್ಟಿ ಪರಿಗಣಿಸುತ್ತಿಲ್ಲ. ವಿದೇಶಗಳಿಗೆ ಉನ್ನತ ಶಿಕ್ಷಣಕ್ಕೆ ಹೋದಾಗಲೂ ಕೆಲವೆಡೆ ಭೌತಿಕ ಅಂಕಪಟ್ಟಿಯನ್ನೇ ಕೇಳುತ್ತಾರೆ. ಆಗ ಮತ್ತೆ ವಿವಿಗೆ ಬಂದು ಅರ್ಜಿ ಸಲ್ಲಿಸಿ ಪಡೆಯಬೇಕು. ಇದಕ್ಕೆ ಸಮಯ ವ್ಯರ್ಥ ಆಗಲಿದೆ ಎನ್ನುವುದು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಆಗ್ರಹ ಕೇಳಿಬಂದಿತ್ತು.

ವಿಸಿಗಳಿಂದಲೂ ಡಿಜಿಟಲ್‌ಗೆ ವಿರೋಧ:

ಇದೆಲ್ಲದರ ನಡುವೆ, ಸಭೆಯಲ್ಲಿ ಡಿಜಿಟಲ್‌ ಅಂಕಪಟ್ಟಿಯೂ ಇಂದು ಸುರಕ್ಷಿತ ಅಲ್ಲ. ಏಕೆಂದರೆ ಅವುಗಳಲ್ಲಿ ವಿವಿಯ ಅಧಿಕಾರಿಗಳ ಸಹಿ ಇರುವುದಿಲ್ಲ. ಡಿಜಿಟಲ್‌ ಸಹಿ ಇರುತ್ತದೆ. ಅಂಕಪಟ್ಟಿ ಮತ್ತು ಸಹಿಯನ್ನು ತಿದ್ದುಪಡಿ ಮಾಡುವಂತಹ ಅಕ್ರಮಗಳು ನಡೆಯುತ್ತಿವೆ. ಕೆಲವೆಡೆ ಖಾಸಗಿ ಕಂಪನಿಗಳು ಇದನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ. ಹಾಗಾಗಿ ಭೌತಿಕ ಅಂಕಪಟ್ಟಿ ನೀಡಲು ಸಭೆಯಲ್ಲಿದ್ದ ಕುಲಪತಿಗಳು ಉನ್ನತ ಶಿಕ್ಷಣ ಸಚಿವರಿಗೆ ಸಲಹೆ, ಅಭಿಪ್ರಾಯ ನೀಡಿದರು. ಇದಕ್ಕೆ ಒಪ್ಪಿದ ಸಚಿವರು, ಇದರ ಜಾರಿಗೆ ವಾರದೊಳಗೆ ಸೂಕ್ತ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

2026-27ನೇ ಸಾಲಿನಿಂದಲೇ ಅಂಕಪಟ್ಟಿ

ಇದರೊಂದಿಗೆ 2026-27ನೇ ಸಾಲಿನಿಂದಲೇ ರಾಜ್ಯದ ಎಲ್ಲಾ 40ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಅವುಗಳ ಸಂಯೋಜಿಕ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ಸಿಗುವುದು ಗ್ಯಾರಂಟಿಯಾಗಲಿದೆ.