ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) 21ನೇ ಪದವಿ ಪ್ರದಾನ ಸಮಾರಂಭ ಶನಿವಾರ ಮಂಗಳೂರಿನ ಕಲಾಮ್ ಆಡಿಟೋರಿಯಂನಲ್ಲಿ ನಡೆಯಿತು. 570 ಬಿಇ ಪದವೀಧರರು ಮತ್ತು ಇಬ್ಬರು ಪಿಎಚ್‌ಡಿ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.

ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) 21ನೇ ಪದವಿ ಪ್ರದಾನ ಸಮಾರಂಭ ಶನಿವಾರ ಮಂಗಳೂರಿನ ಕಲಾಮ್ ಆಡಿಟೋರಿಯಂನಲ್ಲಿ ನಡೆಯಿತು. 570 ಬಿಇ ಪದವೀಧರರು ಮತ್ತು ಇಬ್ಬರು ಪಿಎಚ್‌ಡಿ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.

ಬೆಳಗ್ಗಿನ ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪದವೀಧರರಿಗೆ ಪ್ರಮಾಣಪತ್ರ ನೀಡಲಾಯಿತು. ಹೋಲ್ಡಿಂಗ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಫ್ರಾನ್ಸಿಸ್ ಡಿಸೋಜ, ವಿಎಂವೇರ್ ಬ್ರಾಡ್‌ಕಾಮ್ ಆರ್‌ಡಿ ವಿಭಾಗದ ಎಂಜಿನಿಯರಿಂಗ್ ಲೀಡರ್ ರಿಚರ್ಡ್ ನಜರೆತ್ ಅತಿಥಿಗಳಾಗಿದ್ದರು.

ಅಪರಾಹ್ನ ಕಂಪ್ಯೂಟರ್ ಸೈನ್ಸ್ ಆ್ಯಂಡ್‌ ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬಿಸಿನೆಸ್ ಸಿಸ್ಟಮ್ಸ್ ಹಾಗೂ ಕಂಪ್ಯೂಟರ್ ಸೈನ್ಸ್‌ ಆ್ಯಂಡ್‌ ಡೇಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹೈದರಾಬಾದ್‌ನ ಅನುರಾಗ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರ್ಚನಾ ಮಂತ್ರಿ, ಸಿಮೆನ್ಸ್ ಸಂಸ್ಥೆಯ ಸೀನಿಯರ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ ಆನ್ಸಿ ಜೋವಿತಾ ಕ್ರಾಸ್ಟಾ ಅತಿಥಿಯಾಗಿದ್ದರು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್, ಕಾಲೇಜಿನ ಅಧ್ಯಕ್ಷ ಡಾ.ಪೀಟರ್ ಪಾಲ್ ಸಲ್ಡಾನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲಿಗೆದೆಗುಂದದ ಮನೋಭಾವವನ್ನು ಬೆಳೆಸಿಕೊಳ್ಳಲು, ಹಿನ್ನಡೆಗಳನ್ನು ಕಲಿಕೆಯ ಅನುಭವವಾಗಿ ಸ್ವೀಕರಿಸಲು ಮತ್ತು ಜೀವನದ ಪ್ರಮುಖ ಆಧಾರಸ್ತಂಭಗಳಾದ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರನ್ನು ಗೌರವಿಸಲು ಕರೆ ನೀಡಿದರು.

ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ರಕ್ಷಾ ಮಂತ್ರಿ ಪ್ರಶಸ್ತಿ ಪಡೆದ ಎನ್‌ಸಿಸಿ ನೇವಿ ಕೆಡೆಟ್ ಲಿಶಾ ಡಿ.ಎಸ್. (ಇಸಿಇ) ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ವಿಭಾಗದ ಡೀನ್ ಡಾ.ಬಿನು ಕೆ.ಜಿ., ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ.ಕೆ.ಜ್ಯೋತಿ, ಸಹ ನಿರ್ದೇಶಕ ಫಾ.ಕೆನೆತ್ ಆರ್.ಕ್ರಾಸ್ಟಾ, ಮುಖ್ಯ ಆಡಳಿತಾಧಿಕಾರಿ ಡಾ.ಜಾನ್ ಡಿಸಿಲ್ವ, ಸಂಚಾಲಕಿ ಡಾ.ಅಶ್ವಥಿ ಸಿ.ಎಂ., ಸುಪ್ರಿಯಾ ಸಾಲ್ಯಾನ್ ಮತ್ತಿತರರು ಇದ್ದರು.

ಪ್ರಾಂಶುಪಾಲ ಡಾ.ರಿಯೋ ಡಿಸೋಜ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸಂಸ್ಥೆಯ ನಿರ್ದೇಶಕ ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗಗತಿಸಿದರು. ನಿಶ್ಮಿತಾ, ಅಭಿಲಾಷ್ ಆರ್.ವಿ., ಜೈಷ್ಮಾ ಕುಮಾರಿ, ಡ್ಯಾನಿಲಾ ನೀತಾ ಫೆರಾವೊ ನಿರೂಪಿಸಿದರು.

----