ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.13ರಿಂದ 18ರವರೆಗೆ ನಡೆಯುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರು ಅಂತಿಮ ಸಿದ್ಧತೆಯನ್ನು ಪರಿಶೀಲಿಸಿದರು. ಈ ವೇಳೆ, ಸಂಬಂಧಿಸಿದ ಅಧಿಕಾರಿಗಳು ನೇಮಕಾತಿ ರ‍್ಯಾಲಿ ಯಶಸ್ವಿ ಮಾಡುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪೂರಕ ಕ್ರಮಗಳ ಕುರಿತು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯ ಅಂತಿಮ ಸಿದ್ಧತೆ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ಲ ಇಲಾಖೆಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದುಕೊಂಡು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕು.ನಮ್ಮ ದೇಶದ ಸೈನ್ಯಕ್ಕೆ ಸೇರಬಯಸುವ ಅಗ್ನಿವೀರರ ಆಯ್ಕೆ ಪ್ರಕ್ರಿಯೆಯು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ, ನಮಗೆ ದೊರೆತ ಅವಕಾಶವಾಗಿದೆ. ಹಾಗಾಗಿ, ಅಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸುವ ಮೂಲಕ ಯಾವುದೇ ರೀತಿಯಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಸಹಾಯವಾಣಿ ಕೇಂದ್ರ:
ನ. 13ರಿಂದ 18ರ ವರೆಗೆ ನಡೆಯುವ ರ‍್ಯಾಲಿಯಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಗ್ನಿವೀರರು ರಾಜ್ಯದ ವಿವಿಧೆಡೆಯಿಂದ ಆಗಮಿಸಲಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗುವ ಸಹಾಯವಾಣಿ ಕೇಂದ್ರಗಳ ಮೂಲಕ ರ‍್ಯಾಲಿ ನಡೆಯುವ ಸ್ಥಳಕ್ಕೆ ತಲುಪಲು ಸ್ಥಳದ ಮಾಹಿತಿ ನೀಡಬೇಕು. ಅಗತ್ಯವಾದಲ್ಲಿ ನಿಯೋಜಿಸಿರುವ ಬಸ್ ಗಳ ಮೂಲಕ ಕರೆತರಬೇಕು. ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ತಂಗಲು ವಸತಿ, ಊಟದ ವ್ಯವಸ್ಥೆ:ರ‍್ಯಾಲಿಯಲ್ಲಿ ಭಾಗವಹಿಸಲು ದೂರದ ಪ್ರದೇಶಗಳಿಂದ ಆಗಮಿಸುವ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ನಗರದ ವಾಲ್ಮೀಕಿ ಭವನ, ಡಾ. ಬಾಬು ಜಗನ್ ಜೀವನ್ ರಾಂ ಭವನ, ಜಿಲ್ಲಾ ಕ್ರೀಡಾಂಗಣ, ಸರ್ಕಾರಿ ಅತಿಥಿ ಗೃಹ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ರಾತ್ರಿ ತಂಗುದಾಣಗಳಲ್ಲಿ ತಂಗಲು ವಸತಿ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಅಧಿಕಾರಿಗಳು ಬರುವ ಅಭ್ಯರ್ಥಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅವರ ಪ್ರವೇಶ ಪತ್ರ ಪರಿಶೀಲಿಸಿ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳು ಬೇರೆಡೆ ಎಲ್ಲಿಯೂ ಹೊರವಲಯದಲ್ಲಿ ವಾಸ್ತವ್ಯ ಮಾಡಬಾರದು. ಅವರ ಜೊತೆಯಾಗಿ ಬರುವ ಪೋಷಕರು, ಸ್ನೇಹಿತರಿಗೆ ಅವಕಾಶ ಇರದಿರುವ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ರೀತಿಯಲ್ಲಿ ಲೋಪವಾಗದಂತೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಮೇಲ್ವಿಚಾರಣೆಗೆ ಅಧಿಕಾರಿಗಳ ನೇಮಕ:
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ 5 ದಿನಗಳ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ ಅಲ್ಲಿಯೇ ವ್ಯವಸ್ಥೆ ಮಾಡಬೇಕು. ರಾತ್ರಿಯ ಊಟ ಆಯಾ ವಸತಿ ನಿಲಯಗಳಲ್ಲಿಯೇ ವಿತರಣೆ ಮಾಡಬೇಕು. ಅಭ್ಯರ್ಥಿಯು ಭಾಗವಹಿಸುವ ಶಾರೀರಿಕ ಪರೀಕ್ಷೆ ದಿನದಂದು ಮತ್ತು ಮುಂದಿನ ಹಂತಕ್ಕೆ ಅರ್ಹತೆ ಪಡೆದಾಗ ದೈಹಿಕ, ವೈದ್ಯಕೀಯ ಪರೀಕ್ಷೆ ದಿನದಂದು ಉಟೋಪಚಾರ ಕಲ್ಪಿಸಲಾಗುವುದು. ಮೊದಲನೇ ದಿನವೇ ಅನರ್ಹರಾದಲ್ಲಿ ಹೊರಹೋಗಲಿದ್ದಾರೆ. ಈ ಎಲ್ಲ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಲು ಪಾಳಿ ವೇಳೆಯಲ್ಲಿ ನುರಿತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಹೇಳಿದರು.ಸೂಕ್ತ ಬಂದೋಬಸ್ತ್‌ಗೆ ನಿರ್ದೇಶನ:ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈಗಾಗಲೇ ಅವರು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಪ್ರವೇಶ ಪತ್ರವನ್ನು ಹಾಜರುಪಡಿಸಿದಲ್ಲಿ ಮಾತ್ರ ಅವರಿಗೆ ಜಿಲ್ಲಾ ಕ್ರೀಡಾಂಗಣಕ್ಕೆ ಒಳಪ್ರವೇಶ ನೀಡಬೇಕು. ಅನಧಿಕೃತ ವ್ಯಕ್ತಿಗಳಿಗೆ ಅವಕಾಶವಿರುವುದಿಲ್ಲ. ಸುತ್ತಮುತ್ತಲಿನ ಜಿಲ್ಲೆಗಳಿಂದ ದ್ವಿ-ಚಕ್ರ ವಾಹನಗಳಲ್ಲಿ ಬರುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚಿಸಬೇಕು. ಬ್ಯಾರೀಕೇಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸಿಸಿಟಿವಿ ಆಳವಡಿಕೆ:
ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾ ಕ್ರೀಡಾಂಗಣ, ವಸತಿ ನಿಲಯ, ಒಳ-ಹೊರ ಪ್ರವೇಶ ಸೇರಿದಂತೆ ಅಗತ್ಯ ಕಡೆ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಬೇಕು. ರ‍್ಯಾಲಿ ನಡೆಯುವ ದಿನಗಳಂದು ಕ್ರೀಡಾಂಗಣ ಮತ್ತು ವಸತಿ ನಿಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಪೌರಕಾರ್ಮಿಕರನ್ನು ನಿಯೋಜಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾ ಕ್ರೀಡಾಂಗಣದ ಬಳಿ ಅಗತ್ಯ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ, ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.ನಿರಂತರ ವಿದ್ಯುತ್ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಜನರೇಟರ್ ವ್ಯವಸ್ಥೆ, ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಜೊತೆಗೆ ವೈಫೈ ಮತ್ತು ಎಲ್‌ಎಎನ್ ಸಂಪರ್ಕ, ಟೆಕ್ನಿಕಲ್ ಸಿಬ್ಬಂದಿ ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಪ್ರಧಾನ ಕಚೇರಿಯ ಆರ್‌ಒ ಮತ್ತು ಸೇನಾ ನೇಮಕಾತಿ ಅಧಿಕಾರಿಯಾದ ಮೇಜರ್ ಕಪಿಲ್ ಕೆ. ಅವರು ಮಾತನಾಡಿ, ರ‍್ಯಾಲಿಯು ಬೆಳಗ್ಗೆ 5ರಿಂದಲೇ ಆರಂಭವಾಗಲಿದ್ದು, ಓಟ ಸೇರಿದಂತೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಒಳಗೊಂಡು ಸಂಜೆ 6ರ ವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.100 ಅಭ್ಯರ್ಥಿಗಳಲ್ಲಿ 10 ರಿಂದ 20 ಅಭ್ಯರ್ಥಿಗಳು ಅನರ್ಹತೆ ಹೊಂದುವ ಅವಕಾಶ ಇರಲಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಎಸ್ಪಿ ಡಾ. ಶೋಭಾರಾಣಿ ವಿ.ಜೆ., ಎಡಿಸಿ ಮಹಮ್ಮದ್ ಝುಬೇರ್ ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.