ಅಗರ ಬಹಿಷ್ಕಾರ ಪ್ರಕರಣ: ತಹಸೀಲ್ದಾರ್ ಭೇಟಿ

KannadaprabhaNewsNetwork |  
Published : Jan 05, 2025, 01:32 AM IST
ಅಗರ ಬಹಿಷ್ಕಾರ ಪ್ರಕರಣ: ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ | Kannada Prabha

ಸಾರಾಂಶ

ಅಗರ ಗ್ರಾಮದ ಹಿಂಡಿಮಾರಮ್ಮ ದೇಗುಲದ ಬಳಿಇಲ್ಲಿನ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ ಶನಿವಾರ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಜೊತೆ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಯಳಂದೂರುಅಗರ ಗ್ರಾಮದ ಲಿಂಗಾಯತ ಬಡಾವಣೆಯ ಮಠದ ಬೀದಿಯಲ್ಲಿ ವಾಸವಾಗಿರುವ ವೀರಣ್ಣ, ಗೌರಮ್ಮ ಹಾಗೂ ಇವರ ಮಗ ವಿ.ಸುರೇಶ ಎಂಬವರ ಕುಟುಂಬಕ್ಕೆ ಹಾಕಿರುವ ಬಹಿಷ್ಕಾರದ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಕ್ಕೆ ತಹಸೀಲ್ದಾರ್, ಸಮಾಜ ಕಲ್ಯಾಣಾಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದರು.ಇಲ್ಲಿ ವಾಸವಾಗಿರುವ ಈ ಕುಟುಂಬ ಪರಿಶಿಷ್ಟ ಪಂಗಡದ ನಾಯಕ ಜನಾಂಗದವರಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದು, ಅಲ್ಲಿಂದಾಚೆ ಇವರ ಕುಟುಂಬವನ್ನು ಲಿಂಗಾಯತ ಜನಾಂಗದವರು ಸೇರುವ ಧಾರ್ಮಿಕ ಸಭೆ ಸಮಾರಂಭಗಳು ಹಾಗೂ ದೇಗುಲಕ್ಕೆ ಬಾರದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಈ ಕುಟುಂಬದ ಸದಸ್ಯ ವಿ. ಸುರೇಶ್ ಆರೋಪಿಸಿದ್ದರು. ಈ ಬಗ್ಗೆ ಮಾಹಿತಿ ಬಹಿರಂಗಗೊಂಡ ಹಿನ್ನೆಲೆ ಗ್ರಾಮದ ಹಿಂಡಿ ಮಾರಮ್ಮ ದೇಗುಲದ ಮುಂಭಾಗ ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ, ಪಿಎಸ್‌ಐ ಕರಿಬಸಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ನೇತೃತ್ವದ ತಂಡ ಸಭೆ ನಡೆಸಿದರು. ಗ್ರಾಮದಲ್ಲಿ ವಾಸವಾಗಿರುವ ಎಲ್ಲ ಕೋಮಿನ ಮುಖಂಡರು, ಲಿಂಗಾಯಿತ ಸಮುದಾಯದ ಯಜಮಾನರು, ಮುಖಂಡರು, ಹಾಗೂ ವಿ. ಸುರೇಶ್ ಇವರ ತಂದೆ ವೀರಣ್ಣರನ್ನು ಸೇರಿಸಿ ಸಭೆ ನಡೆಸಿದರು.ಈ ಬಗ್ಗೆ ತಹಸೀಲ್ದಾರ್ ಜಯಪ್ರಕಾಶ್ ಮಾಹಿತಿ ನೀಡಿ, ನಾವು ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ರಜಸ್ವ ನಿರೀಕ್ಷಕರು ಸೇರಿದಂತೆ ಅನೇಕರು ಸಭೆ ನಡೆಸಿದ್ದೇವೆ. ಇವರ ಜನಾಂಗದವರು ನಾವು ಬಹಿಷ್ಕಾರ ಹಾಕಿಲ್ಲ, ಯಾವುದೇ ಜಾತಿಯ ಸಭೆ, ಸಮಾರಂಭಗಳಿಗೆ, ದೇವಸ್ಥಾನಕ್ಕೆ ಬಾರದಂತೆ ನಿರ್ಬಂಧ ಹೇರಿಲ್ಲ. ಯಾವುದೋ ಹಳೆಯ ದ್ವೇಷದಿಂದ ಇವರು ಜನಾಂಗದ ಕೆಲ ಮುಖಂಡರ ಮೇಲೆ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇಬ್ಬರೂ ಸೌಹಾರ್ದತೆಯಿಂದ ನಡೆದುಕೊಂಡು ಹೋಗುವಂತೆ ಮನವರಿಕೆ ಮಾಡಲಾಗಿದೆ. ಆದರೆ ಸುರೇಶ್ ಇದಕ್ಕೆ ಒಪ್ಪುತ್ತಿಲ್ಲ, ಲಿಂಗಾಯತ ಜನಾಂಗದ ಕೆಲ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಇಲ್ಲಿ ನಡೆದಿರುವ ಸಂಪೂರ್ಣ ಘಟನಾವಳಿಗಳ ಬಗ್ಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಎಸ್‌ಪಿ ರವರಿಗೆ ವರದಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ