ಶೈಕ್ಷಣಿಕ ವಿನಿಮಯ ಜ್ಞಾನ ವರ್ಗಾವಣೆಗಾಗಿ ಒಡಂಬಡಿಕೆ

KannadaprabhaNewsNetwork | Published : May 25, 2024 12:46 AM

ಸಾರಾಂಶ

ಈ ಒಡಂಬಡಿಕೆಗೆ ಖನಿಜ ಸಂಸ್ಕರಣೆ ವಿಭಾಗದ ಮುಖ್ಯಸ್ಥ ಡಾ.ಪಿ.ಶರತ್‌ಕುಮಾರ್ ಹಾಗೂ ಬಿಕೆಜಿ ಮೈನ್ಸ್ ಪ್ರೈವೇಟ್ ಲಿ. ಜನರಲ್ ಮ್ಯಾನೇಜರ್ ಪಿ.ಶ್ರೀನಿವಾಸರಾವ್ ಸಹಿ ಮಾಡಿದರು.

ಸಂಡೂರು: ಶೈಕ್ಷಣಿಕ ವಿನಿಯಮ ಹಾಗೂ ಜ್ಞಾನ ವರ್ಗಾವಣೆಗಾಗಿ ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಖನಿಜ ಸಂಸ್ಕರಣೆ ವಿಭಾಗ ಹಾಗೂ ಸ್ಥಳೀಯ ಬಿಕೆಜಿ ಮೈನ್ಸ್ ಪ್ರೈ.ಲಿ. ಸಂಸ್ಥೆ ಶುಕ್ರವಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.

ಈ ಒಡಂಬಡಿಕೆಗೆ ಖನಿಜ ಸಂಸ್ಕರಣೆ ವಿಭಾಗದ ಮುಖ್ಯಸ್ಥ ಡಾ.ಪಿ.ಶರತ್‌ಕುಮಾರ್ ಹಾಗೂ ಬಿಕೆಜಿ ಮೈನ್ಸ್ ಪ್ರೈವೇಟ್ ಲಿ. ಜನರಲ್ ಮ್ಯಾನೇಜರ್ ಪಿ.ಶ್ರೀನಿವಾಸರಾವ್ ಸಹಿ ಮಾಡಿದರು.

ಬಿಕೆಜಿ ಮೈನ್ಸ್ ಡಿಜಿಎಂ ಪ್ರಮೋದ್ ರಿತ್ತಿ, ಭೂವಿಜ್ಞಾನಿ ಕೇಶವ್ ಹಾಗೂ ಸ್ನಾತಕೋತ್ತರ ಕೇಂದ್ರದ ಅನ್ವಯಿಕ ಭೂವಿಜ್ಞಾನ ಮುಖ್ಯಸ್ಥ ಡಾ.ಬಸವರಾಜ ಹಟ್ಟಿ ಉಪಸ್ಥಿತರಿದ್ದು ಈ ಒಡಂಬಡಿಕೆಗೆ ಸಾಕ್ಷಿಯಾದರು.

ಡಾ.ಪಿ.ಶರತ್‌ಕುಮಾರ್ ಮಾತನಾಡಿ, ಗಣಿಗಾರಿಕೆ, ಪರಿಸರ ಮತ್ತು ಖನಿಜ ಸಂಸ್ಕರಣೆ ಕ್ಷೇತ್ರಗಳಲ್ಲಿನ ಕೈಗಾರಿಕಾ ಸವಾಲುಗಳನ್ನು ಪರಿಹರಿಸುವ ಸಲುವಾಗಿ ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಳ್ಳುವುದು ಹಾಗೂ ಕೈಗಾರಿಕೆಯ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ. ಇದು ಯುವ ಮನಸ್ಸುಗಳಲ್ಲಿ ಸಕ್ರಿಯ ಸಂಶೋಧನೆಯನ್ನು ಉತ್ತೇಜಿಸುತ್ತದೆ. ಈ ಒಡಂಬಡಿಕೆ ನಮ್ಮ ವಿದ್ಯಾರ್ಥಿಗಳಿಗೆ ಅನುಭವಿ ವೃತ್ತಿಪರರಿಂದ ಕಲಿಯಲು ಮತ್ತು ಕೆಲಸ ಮಾಡಲು ಅಮೂಲ್ಯವಾದ ಅವಕಾಶಗಳನ್ನು ಕಲ್ಪಿಸಲಿದೆ. ಶೈಕ್ಷಣಿಕ-ಉದ್ಯಮ ಸಹಯೋಗವನ್ನು ಬೆಂಬಲಿಸುತ್ತಿರುವ ಬಿಕೆಜಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಬಿಕೆಜಿ ಕಂಪನಿಯ ಜನರಲ್ ಮ್ಯಾನೇಜರ್ ಪಿ.ಶ್ರೀನಿವಾಸರಾವ್ ಹಾಗೂ ಡಿಜಿಎಂ ಪ್ರೋಮೋದ್ ರಿತ್ತಿ ಮಾತನಾಡಿ, ಜ್ಞಾನ ಮತ್ತು ಪರಿಣತಿಯ ವಿನಿಮಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ನಾವು ಖನಿಜ ಸಂಸ್ಕರಣೆ ವಿಭಾಗದೊಂದಿಗೆ ಸಹಕರಿಸಲು ಉತ್ಸುಕರಾಗಿದ್ದೇವೆ. ಈ ಒಡಂಬಡಿಕೆ ಉದ್ಯಮ-ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಹಾಯ ಮಾಡುತ್ತದೆ. ಇದು ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳ ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

Share this article