ಕನ್ನಡಪ್ರಭ ವಾರ್ತೆ ಬೆಳಗಾವಿಮಾನಸಿಕ ಅಸ್ವಸ್ಥನೊಬ್ಬ ವಿದ್ಯುತ್ ಪರಿವರ್ತಕ (ಟಿಸಿ) ಕಂಬ ಏರಿದ್ದಾನೆ. ನಂತರ ಸಾರ್ವಜನಿಕರತ್ತ ಕೈ ಮಾಡಿ ಹಾಡು ಹೇಳುತ್ತಾ ಹೈಡ್ರಾಮಾ ಸೃಷ್ಟಿಸಿದ ಘಟನೆ ನಗರದ ಟಿಳಕ ಚೌಕ್‌ನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಟಿಸಿ ಕಂಬ ಏರಿ ಏ ದೋಸ್ತಿ ಹಮ್ ನಹೀ ಚೋಡೇಂಗೆ ಎಂದು ಹಾಡು ಹಾಡಿ ಟಿಸಿ ಮೇಲೆ ಕುಳಿತು ಜನರತ್ತ ಕೈ ಬೀಸಿದ್ದಾನೆ. ನಂತರ ಈತನನ್ನು ಗಮನಿಸಿದ ಜನರು, ಹೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಲೈನ್‌ಮೆನ್‌ಗಳು ಸ್ಥಳಕ್ಕಾಗಮಿಸಿ ಕೆಳಗೆ ಇಳಿಯುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಕ್ಯಾರೆ ಎನ್ನದ ವ್ಯಕ್ತಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ವಿದ್ಯುತ್ ಕಂಬದಲ್ಲೇ ಕುಳಿತಿದ್ದಾನೆ. ಹೆಸ್ಕಾಂ ಸಿಬ್ಬಂದಿ ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟರು. ಸುಮಾರು 40 ನಿಮಿಷಗಳ ಕಾಲ ಟಿಳಕಚೌಕ್‌ನಲ್ಲಿ ಸಂಚಾರ ದಟ್ಟಣೆಯಾಗಿತ್ತು.
ಕೊನೆಗೂ ಆತನನ್ನು ಮನವೊಲಿಸಿ ಕೆಳಗೆ ಇಳಿಸಲಾಯಿತು. ಸದ್ಯ ಖಡೆಬಜಾರ್ ಠಾಣೆಯ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ಬೇರೆ ಬೇರೆ ಹೆಸರು ಹೇಳುತ್ತಿರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.